ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಸು ಫ್ರಮ್ ಸೋ’ (Su From So) ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ದೊಡ್ಡ ಮಟ್ಟದ ಯಶಸ್ಸು ಕಂಡ ತಂದುಕೊಟ್ಟಿದ್ದು, ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂಪಾಯಿ ಬಾಚಿಕೊಳ್ಳುವ ಸೂಚನೆ ಇದೆ. ಈ ಚಿತ್ರ ಈಗಾಗಲೇ 40 ಸಾವಿರಕ್ಕೂ ಹೆಚ್ಚು ವೀಕ್ಷಕರಿಂದ 9.5 ರೇಟಿಂಗ್ ಪಡೆದಿದ್ದು, ಇತ್ತೀಚಿನ ದಿನಗಳಲ್ಲಿ ಒಂದು ಸಿನಿಮಾಗೆ ಈ ಮಟ್ಟದ ಮೆಚ್ಚುಗೆ ದೊರೆತಿರುವುದು ಬಹಳ ವಿರಳ.
ಇದಕ್ಕೆ ವಿರುದ್ಧವಾಗಿ, ಕೆಲವರು ಈ ಚಿತ್ರವನ್ನು “ಓವರ್ ಹೈಪ್” ಎಂದು ಕರೆದಿದ್ದಾರೆ. ಆದರೆ ಈ ಮಾತಿಗೆ ನಿರ್ದೇಶಕ ರಾಜ್ ಬಿ. ಶೆಟ್ಟಿ ಖಡಕ್ ಉತ್ತರ ನೀಡಿದ್ದಾರೆ. ಯೂಟ್ಯೂಬರ್‌ಗಳೊಂದಿಗೆ ನಡೆದ ಸಂಭಾಷಣೆಯಲ್ಲಿ ರಾಜ್ ಈ ಕುರಿತು ಪ್ರತಿಕ್ರಿಯಿಸಿದರು. ಅವರು ಹೇಳಿದರು, “ಒಂದು ಚಿತ್ರ ಯಾವ ರೀತಿಯದು ಎಂಬುದನ್ನು ಅರ್ಥಮಾಡಿಕೊಂಡು, ಅದನ್ನು ಸೂಕ್ತವಾದ ಪ್ರೇಕ್ಷಕರಿಗೆ ತಲುಪಿಸಲು ಪ್ರಯತ್ನ ಮಾಡಬೇಕು. ನಾನು ಸಿನಿಮಾಗೆ ಜೋರಾಗಿ ಮಾರ್ಕೆಟಿಂಗ್ ಮಾಡಿಲ್ಲ. ಚಿತ್ರದ ಉದ್ದೇಶವನ್ನಷ್ಟೇ ಜನರ ಮುಂದೆ ಇಟ್ಟಿದ್ದೇನೆ.”
‘ಟೋಬಿ’ ಚಿತ್ರದ ವೇಳೆ ಜನರಿಗೆ ಇದು ಮಾಸ್ ಸಿನಿಮಾ ಎಂದು ಸ್ಪಷ್ಟಪಡಿಸಿದ್ದೆನೆಂದು ಅವರು ಸ್ಮರಿಸಿದರು. “ಇನ್ನು ಕೆಲವರು ‘ಸು ಫ್ರಮ್ ಸೋ’ ಓವರ್ ಹೈಪ್ಡ್ ಆಗಿದೆ ಎಂದು ಟೀಕೆ ಮಾಡಿದ್ದಾರೆ. ಆದರೆ, ನಾವು ಎಲ್ಲಿಂದಲೂ ‘ಚಿತ್ರ ಚೆನ್ನಾಗಿದೆ ನೋಡಿ’ ಎಂದು ಒತ್ತಾಯಿಸಿಲ್ಲ,” ಎಂದು ಸ್ಪಷ್ಟಪಡಿಸಿದರು.
“ಬಸಳೆ ಸೊಪ್ಪು ತಿನ್ನೋವರು ಬಸಳೆ ಸೊಪ್ಪನ್ನು ಮಾತ್ರ ತಿನ್ನಬೇಕು. ಮೀನನ್ನು ತಿನ್ನೋವನು ಮೀನು ತಿನ್ನಬೇಕು ಎಂಬ ತತ್ವ ನನ್ನದು. ಪ್ರತಿ ಸಿನಿಮಾಗೂ ತನ್ನದೇ ಆದ ಪ್ರೇಕ್ಷಕ ವರ್ಗ ಇರುತ್ತದೆ. ಅದನ್ನು ಗುರುತಿಸಿ ಅವರ ಮುಂದೆ ಚಿತ್ರವನ್ನು ಇಡಬೇಕು,” ಎಂದು ರಾಜ್ ಹೇಳಿದರು.
ಅಲ್ಲದೆ, ಅವರು ಪೇಡ್ ಪ್ರೋಮೋಶನ್ ಮಾಡಿಲ್ಲ ಎಂದು ತಿಳಿಸಿದ್ದಾರೆ. “ನಾವು ನಿಜವಾದ ದೃಷ್ಟಿಕೋನದಿಂದ ಸಿನಿಮಾ ಮಾಡಿದ್ದೇವೆ. ನಾನು ಏನು ಹೇಳಿದರೂ ಅದು ಕೆಲಸ ಮಾಡಲ್ಲ. ಜನರು ತಮ್ಮ ಅಭಿಪ್ರಾಯವನ್ನೇ ಹೇಳಬೇಕು. ದುಡ್ಡಿಗಾಗಿ ಸುಳ್ಳು ಹೇಳುವುದು ನನ್ನ ಪ್ರಕಾರ ತಪ್ಪು,” ಎಂದು ಅವರು ತಿರುಗೇಟು ನೀಡಿದರು.
‘ಸು ಫ್ರಮ್ ಸೋ’ ಯಶಸ್ಸಿನ ಹಿಂದೆ ಬಾಯಿ ಮಾತಿನ ಪ್ರಚಾರವೂ ದೊಡ್ಡ ಪಾತ್ರವಹಿಸಿದ್ದು, ಮುಂದಿನ ವಾರಗಳಲ್ಲಿಯೂ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಮತ್ತಷ್ಟು ಬಿರುಗಾಳಿ ಎಬ್ಬಿಸುವ ನಿರೀಕ್ಷೆಯಿದೆ