ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಜಿಯಾದ ಬಾಟುಮಿಯಲ್ಲಿ ನಡೆದ 2025ರ ಫಿಡೆ ಮಹಿಳಾ ಚೆಸ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಕಿರೀಟ ತಂದುಕೊಟ್ಟ 19 ವರ್ಷದ ದಿವ್ಯಾ ದೇಶ್‌ಮುಖ್ ಅವರನ್ನು ಮಹಾರಾಷ್ಟ್ರ ಸರ್ಕಾರ ಶನಿವಾರ ಸನ್ಮಾನಿಸಿದೆ. ನಗರದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ದಿವ್ಯಾ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರವಾಗಿ 3 ಕೋಟಿ ರೂ.ಗಳ ಚೆಕ್‌ನ್ನು ಅವರು ಹಸ್ತಾಂತರಿಸಿದರು.
ಇತ್ತೀಚೆಗಷ್ಟೇ ನಡೆದ ಚೆಸ್ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ದಿವ್ಯಾ, ಭಾರತದ ಇನ್ನೊಬ್ಬ ಗ್ರ್ಯಾಂಡ್‌ಮಾಸ್ಟರ್ ಕೊನೆರು ಹಂಪಿ ವಿರುದ್ಧ ಟೈ ಬ್ರೇಕರ್ ಮೂಲಕ ಜಯ ಸಾಧಿಸಿದ್ದರು. ಈ ಗೆಲುವು ದಿವ್ಯಾಳ ಚೆಸ್ ವೃತ್ತಿಜೀವನದಲ್ಲಿ ಬಹುದೊಡ್ಡ ಸಾಧನೆಯಾಗಿದ್ದು, ಭಾರತದ ಮಹಿಳಾ ಚೆಸ್ ತಾರೆಗಳಲ್ಲಿ ಪ್ರಮುಖರು ಎನಿಸಿಕೊಂಡಿದ್ದಾರೆ.
ಈ ಮಧ್ಯೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಶನಿವಾರ ದಿವ್ಯಾ ನಿವಾಸಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ದಿವ್ಯಾ ಮತ್ತು ಅವರ ಕುಟುಂಬದ ಜೊತೆ ಪರಿಚಯವಿರುವ ನ್ಯಾಯಮೂರ್ತಿ ಗವಾಯಿ, “ಇವತ್ತು ಇಲ್ಲಿ ಬರೋದರಿಂದ 50-55 ವರ್ಷಗಳ ಹಿಂದಿನ ನೆನಪುಗಳು ಮತ್ತೆ ನೆನಪಾಗುತ್ತಿವೆ. ನಾವು ಒಂದೇ ಕುಟುಂಬದವರಂತೆ ಬೆಳೆದಿದ್ದೆವು,” ಎಂದು ಹೇಳಿದ್ದಾರೆ.