ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಬ್ಯಾಡ್ಮಿಂಟನ್ ಲೋಕದ ಜನಪ್ರಿಯ ದಂಪತಿ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಅವರು ತಮ್ಮ ಬೇರ್ಪಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಬೇರ್ಪಡುತ್ತೇವೆ ಎಂಬ ನಿರ್ಧಾರ ಪ್ರಕಟಿಸಿದ್ದ ಈ ಜೋಡಿ, ಈಗ ಮತ್ತೆ ಒಂದಾಗುತ್ತಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಮೂಲಕ ಘೋಷಿಸಿದ್ದಾರೆ.
ಸೈನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, “ಕೆಲವೊಮ್ಮೆ ದೂರವಾಗಿರುವುದು ಹತ್ತಿರವಾಗಿರುವ ಮೌಲ್ಯವನ್ನು ಕಲಿಸುತ್ತದೆ. ನಾವು ಮತ್ತೆ ಒಂದಾಗಲು ತೀರ್ಮಾನಿಸಿದ್ದೇವೆ” ಎಂಬ ಕ್ಯಾಪ್ಷನ್ ಜೊತೆಗೆ ತಮ್ಮಿಬ್ಬರ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಘೋಷಣೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಸಂತಸದಿಂದ ಶುಭಾಶಯಗಳ ಮಳೆ ಹರಿಸುತ್ತಿದ್ದಾರೆ.
35 ವರ್ಷದ ಸೈನಾ ನೆಹ್ವಾಲ್ 2018ರಲ್ಲಿ ಬ್ಯಾಡ್ಮಿಂಟನ್ ಪಟು ಪರುಪಳ್ಳಿ ಕಶ್ಯಪ್ ಅವರನ್ನು ವಿವಾಹವಾಗಿದ್ದರು. ಅವರ 7 ವರ್ಷದ ದಾಂಪತ್ಯ ಮತ್ತು 14 ವರ್ಷಗಳ ಸ್ನೇಹ ಸಂಬಂಧ ಜುಲೈ 14ರಂದು ಮುಕ್ತಾಯಗೊಳ್ಳುತ್ತದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಈ ಸಂಬಂಧ ಅವರು ತಮ್ಮ ತಮ್ಮ ಪ್ರತ್ಯೇಕ ಬದುಕು ಆರಂಭಿಸುತ್ತಿದ್ದಾರೆ ಎಂಬ ಪೋಸ್ಟ್ ಕೂಡ ಹಾಕಿದ್ದರು.
ಆದರೆ ಇದೀಗ ಪರಸ್ಥಿತಿಗಳು ಬದಲಾಗಿರುವುದು ಸ್ಪಷ್ಟವಾಗಿದ್ದು, ತಮ್ಮ ಸಂಬಂಧವನ್ನು ಮತ್ತೊಮ್ಮೆ ಮರುಸಜ್ಜುಗೊಳಿಸಲು ಅವರು ನಿರ್ಧರಿಸಿರುವುದಾಗಿ ತೋರುತ್ತದೆ.
ಸೈನಾ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಆಗಿದ್ದು, ವಿಶ್ವ ನಂ.1 ಆಟಗಾರ್ತಿಯಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಪರುಪಳ್ಳಿ ಕಶ್ಯಪ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರೂ ಈಗ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೈನಾ ಇನ್ನೂ ನಿವೃತ್ತಿ ಘೋಷಿಸದಿರುವುದರಿಂದ ಅವರು ಬ್ಯಾಡ್ಮಿಂಟನ್ ಅಂಗಳದಲ್ಲಿ ಮುಂದುವರಿಯುವ ಸಾಧ್ಯತೆಯೂ ಇದೆ.
ಈ ದಂಪತಿಯ ಮರುಮಿಲನದ ಸುದ್ದಿ ಅಭಿಮಾನಿಗಳಲ್ಲಿ ಸಂತಸ ತಂದಿದ್ದು, ಇನ್ನು ಮುಂದೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಸಮಾಧಾನದಿಂದ ಸಾಗಲಿ ಎಂಬ ಆಶಯ ಅಭಿಮಾನಿಗಳು.