WCL | ABD ಬ್ಯಾಟಿಂಗ್ ಅಬ್ಬರ: ದಕ್ಷಿಣ ಆಫ್ರಿಕಾ ಎದುರು ಮಕಾಡೆ ಮಲಗಿದ ಪಾಕಿಸ್ತಾನ ಲೆಜೆಂಡ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್‌ ತಂಡವು ಎಬಿ ಡಿವಿಲಿಯರ್ಸ್ (AB de Villiers) ಅವರ ಶತಕದ ಅಬ್ಬರದ ನೆರವಿನಿಂದ ಪಾಕಿಸ್ತಾನ ಲೆಜೆಂಡ್ಸ್‌ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ, ಪ್ರಶಸ್ತಿ ಎತ್ತಿಹಿಡಿದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯ ನಂತರವೂ ಎಬಿಡಿ ಪ್ರದರ್ಶಿಸಿದ ಶ್ರೇಷ್ಠ ಆಟ, ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿದೆ.

ಟಾಸ್ ಗೆದ್ದ ಪಾಕಿಸ್ತಾನ ಲೆಜೆಂಡ್ಸ್ ಮೊದಲು ಬ್ಯಾಟಿಂಗ್‌ ಆಯ್ದುಕೊಂಡು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಬಾರಿಸಿತು. ಶಾರ್ಜೀಲ್ ಖಾನ್ ಅವರ 76 ರನ್ (44 ಎಸೆತಗಳಲ್ಲಿ), ಉಮರ್ ಅಮೀನ್ (36) ಮತ್ತು ಆಸಿಫ್ ಅಲಿ (28) ಅವರ ನೆರವಿನಿಂದ ಪಾಕಿಸ್ತಾನ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಬಾರಿಸಲು ಯಶಸ್ವಿಯಾಯಿತು. ದಕ್ಷಿಣ ಆಫ್ರಿಕಾ ಬೌಲರ್‌ಗಳಿಗೂ ಅಷ್ಟೇನೂ ಪರಿಣಾಮಕಾರಿ ಆಟ ತೋರಿಸಲು ಸಾಧ್ಯವಾಗಲಿಲ್ಲ.

ಆದರೆ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಆರಂಭದಿಂದಲೇ ದಿಟ್ಟ ಆಟವನ್ನೇ ತೋರಿಸಿತು. ಆರಂಭಿಕ ಹಂತದಲ್ಲಿ ಹಾಶಿಂ ಆಮ್ಲಾ (18) ವಿಕೆಟ್ ಕಳೆದುಕೊಂಡರೂ, ಅದಾದ ನಂತರ ಬ್ಯಾಟಿಂಗ್‌ ಕಣದಲ್ಲಿ ಎಬಿಡಿ ಮತ್ತು ಜೆಪಿ ಡುಮಿನಿ ಜತೆಯಾಗಿದ್ದು ಪಾಕಿಸ್ತಾನ ಬೌಲಿಂಗ್ ಮೇಲೆ ಪಟ್ಟು ಸಾಧಿಸಿದರು. ಡಿವಿಲಿಯರ್ಸ್ 60 ಎಸೆತಗಳಲ್ಲಿ ಅಜೇಯ 120 ರನ್ ಬಾರಿಸಿದರು. ಡುಮಿನಿ ಕೂಡಾ ಉತ್ತಮ ಆಟ ತೋರಿಸಿ 28 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿದರು. ಈ ಜೋಡಿ 16.5 ಓವರ್‌ಗಳಲ್ಲಿ 196 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಇದು ಡಿವಿಲಿಯರ್ಸ್ ಅವರ ಟೂರ್ನಿಯ ಮೂರನೇ ಶತಕವಾಗಿದ್ದು, ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ 39 ಎಸೆತಗಳಲ್ಲಿ ಹಾಗೂ ಇಂಗ್ಲೆಂಡ್ ವಿರುದ್ಧ 41 ಎಸೆತಗಳಲ್ಲಿ ಶತಕ ಗಳಿಸಿದ್ದರು. ಈ ಸಾಧನೆಯಿಂದ ಅವರು ಮತ್ತೆ ಒಂದಷ್ಟು ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ.

ಈ ನಡುವೆ ಭಾರತ ಲೆಜೆಂಡ್ಸ್ ಸೆಮಿಫೈನಲ್‌ಗೆ ತಲುಪಿದ್ದರೂ ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿದ್ದರಿಂದ ಪಾಕ್ ನೇರವಾಗಿ ಫೈನಲ್‌ ಪ್ರವೇಶಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಎಬಿಡಿ ತಂಡವೇ ವಿಜಯ ಸಾಧಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!