ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ‘ಆಶಿಖಿ 3’ ಸಿನಿಮಾನಲ್ಲಿ ಶ್ರೀಲೀಲಾ ಜೊತೆಗೆ ನಟಿಸುತ್ತಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದು ಈಗ ಸ್ಟಾರ್ ಆಗಿ ಮೆರೆಯುತ್ತಿರುವ ಕಾರ್ತಿಕ್ ಆರ್ಯನ್ಗೆ ಇದೀಗ ಬಾಲಿವುಡ್ ಚಿತ್ರರಂಗವೇ ಎಚ್ಚರಿಕೆ ನೀಡಿದೆ.
ಅಮೆರಿಕದ ಹ್ಯೂಸ್ಟನ್ನಲ್ಲಿ ಆಗಸ್ಟ್ 15 ರಂದು ನಡೆಯಲಿರುವ ‘ಆಜಾದಿ ಉತ್ಸವ್’ ಕಾರ್ಯಕ್ರಮದಲ್ಲಿ ಕಾರ್ತಿಕ್ ಆರ್ಯನ್ ಭಾಗವಹಿಸಲಿದ್ದಾರೆ. ಈಗಾಗಲೇ ‘ಆಜಾದಿ ಉತ್ಸವ್’ ಕಾರ್ಯಕ್ರಮದ ಸಾಮಾಜಿಕ ಜಾಲತಾಣ ಪೋಸ್ಟ್ಗಳು ಹರಿದಾಡುತ್ತಿವೆ. ಕಾರ್ಯಕ್ರಮದಲ್ಲಿ ಕಾರ್ತಿಕ್ ಆರ್ಯನ್ ಭಾಗವಹಿಸುತ್ತಿದ್ದಾರೆಂದು ಜೋರು ಪ್ರಚಾರ ಸಹ ಮಾಡಲಾಗಿದೆ. ಆದರೆ ಇದೀಗ ಈ ಕಾರ್ಯಕ್ರಮದ ವಿಷಯವಾಗಿ ಸಿನಿಮಾ ಕಾರ್ಮಿಕರ ಸಂಘವಾಗಿರುವ (ಎಫ್ಡಬ್ಲುಐಸಿಇ) ಪತ್ರ ಬರೆದು ಕಾರ್ತಿಕ್ ಆರ್ಯನ್ಗೆ ಎಚ್ಚರಿಕೆ ನೀಡಿದೆ.
‘ಆಜಾದಿ ಉತ್ಸವ್: ದಿ ಇಂಡಿಯನ್ಸ್ ಇಂಡಿಪೆಂಡೆನ್ಸ್ ಡೇ’ ಕಾರ್ಯಕ್ರಮವನ್ನು ಅಗಾಸ್ ರೆಸ್ಟೊರೆಂಟ್ ಆಂಡ್ ಕೇಟರಿಂಗ್ಸ್ ಅವರು ಆಯೋಜನೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾರ್ತಿಕ್ ಆರ್ಯನ್ ಭಾಗವಹಿಸಲಿದ್ದಾರೆ. ಆದರೆ ಈ ಕಾರ್ಯಕ್ರಮ ಆಯೋಜಿಸಿರುವ ಅಗಸ್ ರೆಸ್ಟೊರೆಂಟ್ ಆಂಡ್ ಕೇಟರಿಂಗ್ಸ್ ಪಾಕಿಸ್ತಾನ ವ್ಯಕ್ತಿಯ ಮಾಲೀಕತ್ವ ಹೊಂದಿದ್ದು, ಇದೇ ರೆಸ್ಟೊರೆಂಟ್ ವತಿಯಿಂದ ‘ಜಶ್ನ್-ಎ-ಅಜಾದಿ’ ಹೆಸರಿನಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನೂ ಸಹ ಆಯೋಜಿಸಲಾಗಿದೆಯಂತೆ. ಪಾಕ್ ಸ್ವಾತಂತ್ರ್ಯೋತ್ಸವ ಆಚರಣೆಗೆ ಪಾಕಿಸ್ತಾನಿ ಜನಪ್ರಿಯ ಗಾಯಕ ಅತಿಫ್ ಅಸ್ಲಮ್ ಅನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ.
ಕಾರ್ಯಕ್ರಮ ಆಯೋಜನೆ ಮಾಡಿರುವ ಅಗಾಸ್ ರೆಸ್ಟೊರೆಂಟ್ ಆಂಡ್ ಕೇಟರಿಂಗ್ಸ್ನ ಮಾಲೀಕ ಶೌಖತ್ ಮರೆದಿಯಾ ಅವರು ಪಾಕಿಸ್ತಾನ ಮೂಲದವರಾಗಿದ್ದು, ಪಾಕಿಸ್ತಾನದವರು ಆಯೋಜಿಸುತ್ತಿರುವ ಕಾರ್ಯಕ್ರಮದಲ್ಲಿ ಬಾಲಿವುಡ್ನ ನಟ ಭಾಗಿ ಆಗುತ್ತಿರುವುದನ್ನು ಸಿನಿಮಾ ಕಾರ್ಮಿಕರ ಸಂಘವಾಗಿರುವ (ಎಫ್ಡಬ್ಲುಐಸಿಇ) ವಿರೋಧಿಸಿದೆ. ಒಂದೊಮ್ಮೆ ಕಾರ್ತಿಕ್ ಆರ್ಯನ್ ಆ ಕಾರ್ಯಕ್ರಮದಲ್ಲಿ ಭಾಗಿ ಆದರೆ ಅದು ರಾಷ್ಟ್ರೀಯ ಹಿತದ ದೃಷ್ಟಿಯಿಂದ ಸೂಕ್ತವಲ್ಲ’ ಎಂದಿದೆ.