ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹು ನಿರೀಕ್ಷಿತ ಚಿತ್ರ ʼಕೂಲಿ ತೆರೆಗೆ ಬರಲು ಸಜಾಗಿದ್ದು, ಈ ಹಿನ್ನೆಲೆ ರಜನಿಕಾಂತ್ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ರಜನಿಕಾಂತ್ ಮತ್ತು ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿರುವ ನಿರ್ದೇಶಕ ಲೋಕೇಶ್ ಕನಗರಾಜ್ ಮೊದಲ ಬಾರಿಗೆ ಒಂದಾಗುತ್ತಿರುವ ಈ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಆಗಸ್ಟ್ 14ರಂದು ಬಿಡುಗಡೆಯಾಗಲಿರುವ ಈ ಚಿತ್ರ ಈಗಾಗಲೇ ಕುತೂಹಲ ಕೆರಳಿಸಿದೆ. ಪ್ರಚಾರಕ್ಕೆ ಇಳಿದಿರುವ ಚಿತ್ರತಂಡ ಆಗಸ್ಟ್ 2ರಂದು ಚೆನ್ನೈಯಲ್ಲಿ ಟ್ರೈಲರ್ ರಿಲೀಸ್ ಮಾಡಿದೆ. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ರಜನಿಕಾಂತ್ ಸಿನಿಮಾ ಕ್ಷೇತ್ರಕ್ಕೆ ಬರುವ ಮುನ್ನ ತಾವು ಎದುರಿಸಿದ ಸಾವಾಲಿನ ದಿನಗಳನ್ನು ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಕಂಡಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿ ಬಳಿಕ ಸ್ಟೈಲಿಶ್ ಸ್ಟಾರ್ ಆಗಿ ಬೆಳೆದಿರುವ ರೀತಿಯೇ ಅದ್ಭುತ. 74ರ ಇಳಿ ವಯಸ್ಸಿನಲ್ಲಿಯೂ ಅದೇ ಚಾರ್ಮ್ ಉಳಿಸಿಕೊಂಡಿರುವ ಅವರು ಬಹು ಬೇಡಿಕೆಯ ನಟರೂ ಹೌದು. ಸಿನಿಮಾಕ್ಕಾಗಿ ಕೋಟಿ ಕೋಟಿ ರೂ. ಸಂಭಾವನೆ ಪಡೆಯುವ ಅವರು ಒಂದು ಕಾಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆಗ ಅವರ ಸಂಬಳ 2 ರೂ. ಆಗಿತ್ತಂತೆ. ಈ ವಿಚಾರವನ್ನು ಸ್ವತಃ ಅವರೇ ಹಂಚಿಕೊಂಡಿದ್ದಾರೆ.
ತಾವು ಚಿತ್ರರಂಗದಲ್ಲಿ ಮಿಂಚುವ ಮೊದಲು ಕೂಲಿಯಾಗಿ ಕೆಲಸ ಮಾಡಿದ ದಿನಗಳನ್ನು ಅವರು ಮೆಲುಕು ಹಾಕಿಕೊಂಡಿದ್ದಾರೆ. ಅದರಲ್ಲೂ ಮೊದಲ ಬಾರಿ ತಾವು ಕಣ್ಣೀರು ಹಾಕಿದ ಆ ಘಟನೆಯನ್ನು ವಿವರಿಸಿದ್ದಾರೆ.
ಕಾಲೇಜು ಮುಗಿಸಿ ಕೆಲಸ ಇಲ್ಲದೆ ಓಡಾಡಿಕೊಂಡಿದ್ದ ಸಮಯದಲ್ಲಿ ಕೆಲವರು ತಮಾಷೆಮಾಡುತ್ತಿದ್ದರು. ನಾನು ಕೂಲಿಯಾಗಿ ಕೆಲಸ ಮಾಡುತ್ತಿದ್ದಾಗ ಅನೇಕ ಬಾರಿ ನನ್ನನ್ನು ರೇಗಿಸಲಾಗಿತ್ತು. ಒಂದು ದಿನ ಒಬ್ಬ ವ್ಯಕ್ತಿ ತನ್ನ ಲಗೇಜ್ ಅನ್ನು ಟೆಂಪೋಗೆ ತುಂಬಲು ಸೂಚಿಸಿದ್ದ. ಇದಕ್ಕಾಗಿ ನನಗೆ 2 ರೂ. ಕೊಟ್ಟ. ಆತನ ಧ್ವನಿ ನನಗೆ ಪರಿಚಿತವೆನಿಸಿತು. ಬಳಿಕ ಆತ ನನ್ನ ಕಾಲೇಜು ಸಹಪಾಠಿ ಎನ್ನುವುದು ಅರಿವಿಗೆ ಬಂತು. ಕೊನೆಯಲ್ಲಿ ಆತ ಅವತ್ತು ನಿನಗಿದ್ದ ಅಹಂಕಾರ ಅಷ್ಟಿಷ್ಟಲ್ಲ. ನಿನಗೆ ಆ ಕಾಲೇಜು ದಿನಗಳು ನೆನಪಿದ್ಯಾ? ಎಂದು ಹೇಳಿ ಅಣಕಿಸಿದ್ದ. ಆ ದಿನ ನಾನು ಮೊದಲ ಬಾರಿಗೆ ಅತ್ತಿದ್ದೆʼ ಎಂದು ರಜನಿಕಾಂತ್ ಅಂದಿನ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ʼಕೂಲಿʼ ಚಿತ್ರದ ನಿಜವಾದ ನಾಯಕ ಲೋಕೇಶ್ ಎಂದು ಬಣ್ಣಿಸಿದ್ದಾರೆ. ಬಹುತಾರಾಗಣದ ʼಕೂಲಿʼ ಚಿತ್ರದಲ್ಲಿ ನಾಗಾರ್ಜುನ್, ರಿಯಲ್ ಸ್ಟಾರ್ ಉಪೇಂದ್ರ, ರಚಿತಾ ರಾಮ್, ಸತ್ಯರಾಜ್, ಶ್ರುತಿ ಹಾಸನ್, ಸೌಬಿನ್ ಶಹಿರ್ ಮತ್ತಿತರರು ನಟಿಸಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.