ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) 2013ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮತ್ತು ಸುಪ್ರೀಂಕೋರ್ಟ್ನ ನಿರ್ದೇಶನಗಳನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಮೂಲಕ ರಾಜ್ಯ ಸರ್ಕಾರದಿಂದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗೆ ಮಹತ್ವದ ಕ್ರಮ ಕೈಗೊಳ್ಳಲಾಗಿದೆ..
ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಕರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಲ್ಲಾ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳಿಗೆ ಪತ್ರದಲ್ಲಿ ನಿರ್ದೇಶನ ನೀಡಿದ್ದಾರೆ.
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ(ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) 2013ರ ಕಾಯ್ದೆಗೆ ಸಂಬಂಧಿಸಿದಂತೆ,ಸುಪ್ರೀಂಕೋರ್ಟ್ ಸೂಕ್ತ ನಿರ್ದೇಶನಗಳನ್ನು ನೀಡಿ ಕ್ರಮ ಕೈಗೊಳ್ಳಲು ಸೂಚನೆಯನ್ನು ನೀಡಿದೆ. ಅದರಂತೆ ನಿರ್ದೇಶನಗಳನ್ನು ಪಾಲಿಸಲು ಹಾಗೂ ಸೂಕ್ತ ಕ್ರಮ ಕೈಗೊಳ್ಳಲು ಉಲ್ಲೇಖಿತ(2)ರ ಪತ್ರದಲ್ಲಿ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ.
ಇಲಾಖೆ/ಸಚಿವಾಲಯದಲ್ಲಿ ಕಾಯ್ದೆಯ ಅನುಷ್ಠಾನಕ್ಕಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸುವುದು. ಮತ್ತು ಅಧೀನ ಕಚೇರಿ/ಸಂಸ್ಥೆಗಳ (ಸರ್ಕಾರಿ ಮತ್ತು ಖಾಸಗಿ) ಮಾಹಿತಿ ಮತ್ತು ಆಂತರಿಕ ದೂರು ಸಮಿತಿಯ ಮಾಹಿತಿಯನ್ನು She-Box-Portal ನಲ್ಲಿ ಅಳವಡಿಸಬೇಕು.
ಪೋರ್ಟಲ್ನಲ್ಲಿ/ನೇರವಾಗಿ ಸ್ವೀಕರಿಸಿದ ದೂರುಗಳ ವಿಲೇವಾರಿಯ ವೇಗ ಮತ್ತು ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಬೇಕು.
ಇಲಾಖೆಯ ಹಂತದಲ್ಲಿ ಕಾಲಕಾಲಕ್ಕೆ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) 2014ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಪರಿಶೀಲನಾ ಸಭೆಗಳನ್ನು ಆಯೋಜಿಸಬೇಕು.
ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು, ಸಂಬಂಧಪಟ್ಟ ನೋಡಲ್ ಅಧಿಕಾರಿಗಳು ಕಾಲಕಾಲಕ್ಕೆ ಮಾಹಿತಿಯನ್ನು ಪೋರ್ಟಲ್ನಲ್ಲಿ ಅಪ್ಡೇಟ್ ಮಾಡಬೇಕು. ಇನ್ನೂ ಆಂತರಿಕ ದೂರು ಸಮಿತಿಯನ್ನು ರಚನೆ ಮಾಡದೇ ಇರುವ ಅಧೀನ ಕಚೇರಿ/ಸಂಸ್ಥೆಗಳಲ್ಲಿ ತುರ್ತಾಗಿ ಸಮಿತಿಯನ್ನು ರಚಿಸಬೇಕು ಎಂದು ಸೂಚನೆ ನೀಡಿದ್ದಾರೆ.