ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ಸಿನಿಮಾರಂಗದಲ್ಲಿ ನಾಳೆಯಿಂದ ಹಠಾತ್ತನೆ ಎಲ್ಲ ಸಿನಿಮಾ ಚಿತ್ರೀಕರಣ ಬಂದ್ ಆಗುತ್ತಿದೆ.
ರಾಜಮೌಳಿಯ ಸಿನಿಮಾ ಸೇರಿದಂತೆ ತೆಲುಗಿನ ಎಲ್ಲ ಸಿನಿಮಾಗಳ ಚಿತ್ರೀಕರಣ ನಾಳೆ (ಆಗಸ್ಟ್ 4) ಬಂದ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ, ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್ (ತೆಲುಗು ಸಿನಿಮಾ ಕಾರ್ಮಿಕರ ಒಕ್ಕೂಟ) ಬಂದ್ಗೆ ಕರೆ ನೀಡಿದೆ.
24 ವಿವಿಧ ವಿಭಾಗಗಳ ಸಿನಿಮಾ ಕಾರ್ಮಿಕರುಗಳ ಒಕ್ಕೂಟ ಇದಾಗಿದ್ದು, ತನ್ನ ಸುಪರ್ಧಿಗೆ ಬರುವ 24 ವಿಭಾಗದ ಕಾರ್ಮಿಕರುಗಳಿಗೆಸಿನಿಮಾ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಿದೆ. ಇದರಿಂದಾಗಿ ನಾಳೆಯಿಂದ ತೆಲುಗಿನ ಎಲ್ಲ ಸಿನಿಮಾ ಚಿತ್ರೀಕರಣಗಳು ಬಂದ್ ಆಗಲಿವೆ.
ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್, ತೆಲುಗು ಸಿನಿಮಾ ಕಾರ್ಮಿಕರ ದಿನಗೂಲಿ ಮೊತ್ತ ಹೆಚ್ಚಿಸುವಂತೆ ನಿರ್ಮಾಪಕರ ಸಂಘದೊಂದಿಗೆ ಕೆಲ ತಿಂಗಳುಗಳಿಂದಲೂ ಸಭೆ ನಡೆಸುತ್ತಲೇ ಇತ್ತು. ಸಿನಿಮಾ ನಾಯಕರ ಸಂಭಾವನೆ ಹೆಚ್ಚಾಗಿದೆ, ನಟ-ನಟಿಯರ ಸಂಭಾವನೆ ಹೆಚ್ಚಾಗಿದೆ. ಒಟಿಟಿ ಇನ್ನಿತರೆ ಕಾರಣಕ್ಕೆ ಸಿನಿಮಾ ನಿರ್ಮಾಪಕರಿಗೆ ಬರುವ ಲಾಭ ಹತ್ತುಪಟ್ಟಾಗಿದೆ ಆದರೆ ಸಿನಿಮಾ ಕಾರ್ಮಿಕರ ದಿನಗೂಲಿ ವರ್ಷಗಳಿಂದಲೂ ಏರಿಕೆ ಆಗಿಲ್ಲ. ಹಾಗಾಗಿ ಕಾರ್ಮಿಕರ ದಿನಗೂಲಿಯನ್ನು 30% ಹೆಚ್ಚಳ ಮಾಡುವಂತೆ ಮನವಿ ಒತ್ತಾಯ ಮಾಡಲಾಗಿತ್ತು. ಇದಕ್ಕೆ ನಿರ್ಮಾಪಕ ಸಂಘ ಒಪ್ಪಿಲ್ಲ.
ಇದೇ ಕಾರಣಕ್ಕೆ ಇಂದು ಹೈದರಾಬಾದ್ನಲ್ಲಿ ಸಭೆ ನಡೆಸಿದ ತೆಲುಗು ಫಿಲಂ ಎಂಪ್ಲಾಯಿಸ್ ಫೆಡರೇಷನ್ ಮುಖಂಡರು, ನಾಳೆಯಿಂದಲೇ ಸಿನಿಮಾಗಳ ಚಿತ್ರೀಕರಣ ಬಂದ್ ಮಾಡುವಂತೆ ಕರೆ ನೀಡಿದ್ದಾರೆ. ಆದರೆ ಯಾವ ನಿರ್ಮಾಣ ಸಂಸ್ಥೆ ಹೊಸ ದಿನಗೂಲಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಹೆಚ್ಚುವರಿ ಕೂಲಿ ನೀಡುತ್ತಿದೆಯೋ ಆ ಸಿನಿಮಾಗಳ ಕೆಲಸಗಳು ಮಾತ್ರವೇ ಮುಂದುವರೆಯಲಿವೆ. ಹಳೆ ದಿನಗೂಲಿ ವ್ಯವಸ್ಥೆ ಹೊಂದಿರುವ ಸಿನಿಮಾಗಳ ಚಿತ್ರೀಕರಣ ಬಂದ್ ಆಗಲಿವೆ.
ಹಲವಾರು ದೊಡ್ಡ ಸ್ಟಾರ್ ನಟರ ಸಿನಿಮಾಗಳ ಚಿತ್ರೀಕರಣ ಪ್ರಸ್ತುತ ಚಾಲ್ತಿಯಲ್ಲಿವೆ. ರಾಜಮೌಳಿ-ಮಹೇಶ್ ಬಾಬು ಸಿನಿಮಾ, ಪ್ರಭಾಸ್ ನಟನೆಯ ಎರಡು ಸಿನಿಮಾ, ಚಿರಂಜೀವಿ ನಟನೆಯ ಎರಡು ಸಿನಿಮಾ, ಜೂ ಎನ್ಟಿಆರ್ ನಟನೆಯ ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ, ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಹೀಗೆ ಹಲವು ಸಿನಿಮಾಗಳ ಚಿತ್ರೀಕರಣ ಚಾಲ್ತಿಯಲ್ಲಿದ್ದು ಈಗ ಈ ಎಲ್ಲ ಸಿನಿಮಾಗಳ ಚಿತ್ರೀಕರಣ ಬಂದ್ ಆಗಲಿವೆ.