ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಸು ಫ್ರಮ್ ಸೋ’ ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದೆ. ಅಚ್ಚರಿಯ ವಿಚಾರ ಏನೆಂದರೆ ಸೋಮವಾರವೂ ಅನೇಕ ಶೋಗಳು ಸೋಲ್ಡ್ಔಟ್ ಆಗಿವೆ.
ಕನ್ನಡದ ಸಿನಿಮಾ ಒಂದು ಈ ರೀತಿಯಲ್ಲಿ ಮೋಡಿ ಮಾಡುತ್ತಿರುವುದು ಇದೇ ಮೊದಲು ಎಂದರೂ ತಪ್ಪಾಗಲಾರದು. ಈ ಚಿತ್ರಕ್ಕೆ ಬುಕ್ ಮೈ ಶೋನಲ್ಲಿ 56 ಸಾವಿರ ಮಂದಿ ವೋಟ್ ಮಾಡಿದ್ದು, 9.5 ರೇಟಿಂಗ್ ಪಡೆದುಕೊಂಡಿದೆ. ಈ ಚಿತ್ರದ ಅಬ್ಬರ ಇನ್ನೂ ಕೆಲ ವಾರ ಸಾಗುವ ನಿರೀಕ್ಷೆ ಇದೆ. ಸಿನಿಮಾಗೆ ಬೆಂಗಳೂರಿನಲ್ಲಿ 450ಕ್ಕೂ ಅಧಿಕ ಶೋಗಳು ಸಿಕ್ಕಿವೆ.
‘ಸು ಫ್ರಮ್ ಸೋ’ ಸಿನಿಮಾ ರಿಲೀಸ್ ಆಗಿದ್ದು ಜುಲೈ 25ರಂದು. ಈಗಾಗಲೇ ಸಿನಿಮಾ ಎರಡು ವಾರಗಳನ್ನು ಪೂರ್ಣಗೊಳಿಸಿ, ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೂರನೇ ಸೋಮವಾರ ಸಿನಿಮಾಗೆ ಶುಭ ಸುದ್ದಿಯನ್ನೇ ತಂದಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾಗಳು ಹೌಸ್ಫುಲ್ ಪ್ರದರ್ಶನ ಕಾಣುತ್ತಿವೆ. ರಾತ್ರಿ ಶೋಗಳಿಗೆ ಒಂದು ದಿನ ಮೊದಲೇ ಬುಕಿಂಗ್ ನಡೆಯುತ್ತಿದ್ದು, ಕೆಲವು ಶೋಗಳು ಫಾಸ್ಟ್ ಫಿಲ್ಲಿಂಗ್ ಹಂತಕ್ಕೆ ಬಂದಿವೆ.
ಇನ್ನು, ‘ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ಗಳು ಶೋ ನೀಡುತ್ತಿಲ್ಲ’ ಎಂಬ ಪರಿಸ್ಥಿತಿ ಈಗ ಬದಲಾಗಿದೆ. ‘ಸು ಫ್ರಮ್ ಸೋ’ಗೆ ಅನೇಕ ಮಲ್ಟಿಪ್ಲೆಕ್ಸ್ಗಳು 10ರಿಂದ 15 ಶೋಗಳನ್ನು ನೀಡುತ್ತಿವೆ. ಈ ಎಲ್ಲಾ ಶೋಗಳು ಹೌಸ್ಫುಲ್ ಪ್ರದರ್ಶನ ಕಾಣುತ್ತಿವೆ. ಈ ಚಿತ್ರದ ಕಲೆಕ್ಷನ್ ಹೀಗೆಯೇ ಮುಂದುವರಿದರೆ ಇದೇ ವಾರ ಸಿನಿಮಾ 50 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಮೂರನೇ ವಾರ ಚಿತ್ರಕ್ಕೆ ಬೆಳಿಗ್ಗೆ 7.50ಕ್ಕೆ ಶೋ ಪ್ರದರ್ಶನ ಮಾಡುತ್ತಿರುವುದು ಇದೇ ಮೊದಲು.