ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ ಸಂಸ್ಥಾಪಕ ಶಿಬು ಸೊರೆನ್ ಕೊನೆಯುಸಿರೆಳೆದಿದ್ದಾರೆ.
81 ವರ್ಷದ ಸೊರೆನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಹಾಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ತಂದೆ.
ಶಿಬು ಸೊರೆನ್ ಅವರನ್ನು ಜುಲೈನಲ್ಲಿ ಮೂತ್ರಪಿಂಡದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾದ ಕಾರಣ, ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು.
ಶಿಬು ಸೊರೆನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಮತ್ತು ದೇಶದ ಹಿರಿಯ ನಾಯಕರಲ್ಲಿ ಒಬ್ಬರಾದ ಶಿಬು ಸೊರೆನ್ ಸಮಾಜದ ದುರ್ಬಲ ವರ್ಗಗಳ, ವಿಶೇಷವಾಗಿ ಬುಡಕಟ್ಟು ಸಮಾಜದ ಹಕ್ಕುಗಳು ಮತ್ತು ಸಬಲೀಕರಣಕ್ಕಾಗಿ ಜೀವಮಾನವಿಡೀ ಹೋರಾಡಿದ ಜಾರ್ಖಂಡ್ನ ಧೀಮಂತ ನಾಯಕರಲ್ಲಿ ಒಬ್ಬರು ಎಂದು ಹೇಳಿದ್ದಾರೆ. ನನಗೂ ಅವರ ದೀರ್ಘ ಪರಿಚಯವಿತ್ತು. ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ ಎಂದಿದ್ದಾರೆ.