ಇತ್ತೀಚಿನ ದಿನಗಳಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಟಿವಿ ಸೇರಿದಂತೆ ಡಿಜಿಟಲ್ ಸ್ಕ್ರೀನ್ ಬಳಕೆಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಸೌಮ್ಯವಾಗಿದ್ದರೂ, ಚಿಕ್ಕ ವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಜತೆಗೆ ಒತ್ತಡ, ಸರಿಯಾದ ಆಹಾರವಿಲ್ಲದ ಜೀವನಶೈಲಿ ಮತ್ತು ನಿದ್ರೆಯ ಕೊರತೆ ಕೂಡ ಕಣ್ಣಿನ ಆರೋಗ್ಯವನ್ನು ಕೆಡಿಸುತ್ತಿವೆ. ಅಂತಹ ಸಂದರ್ಭದಲ್ಲಿ ನೈಸರ್ಗಿಕವಾಗಿ ಕಣ್ಣುಗಳನ್ನು ಪೋಷಿಸುವುದಕ್ಕೆ ನೆಲ್ಲಿಕಾಯಿ ಉತ್ತಮ ಪರಿಹಾರವಾಗಿದೆ.
ವೈದ್ಯರ ಪ್ರಕಾರ, ನೆಲ್ಲಿಕಾಯಿ ಅಥವಾ ಆಮ್ಲಾದಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ವಿಟಮಿನ್ ಎ ಕಣ್ಣಿನ ಕಾರ್ನಿಯಾವನ್ನು ಪೋಷಿಸಿ ದೃಷ್ಟಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವಪೂರ್ಣ ಪಾತ್ರವಹಿಸುತ್ತದೆ. ಇದೇ ವೇಳೆ, ವಿಟಮಿನ್ ಸಿ ರಾಡಿಕಲ್‌ಗಳಿಂದ ಕಣ್ಣುಗಳನ್ನು ರಕ್ಷಿಸಿ ಮ್ಯಾಕ್ಯುಲರ್ ಡಿಜೆನರೇಶನ್, ರೆಟಿನೋಪಥಿ ಮುಂತಾದ ಸಮಸ್ಯೆಗಳಿಂದ ದೂರವಿಡುತ್ತದೆ.
ಇದು ಮಧುಮೇಹ ಇರುವವರಿಗೆ ವಿಶೇಷವಾಗಿ ಪ್ರಯೋಜನಕಾರಿ, ಏಕೆಂದರೆ ಆಮ್ಲಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮೂಲಕ ಕಣ್ಣಿನ ರೆಟಿನಾ ಮೇಲೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ.
ಆಮ್ಲಾವನ್ನು ವಿವಿಧ ರೀತಿಯಲ್ಲಿ ಸೇವಿಸಬಹುದು. ಪ್ರತಿದಿನ ಎರಡು ನೆಲ್ಲಿಕಾಯಿಗಳನ್ನು ಸೇವಿಸುವುದು ಸೂಕ್ತ. ಜೊತೆಗೆ, ಅದರಿಂದ ರಸ ತಯಾರಿಸಿ ಕುಡಿಯಬಹುದು ಅಥವಾ ಚಟ್ನಿ ರೂಪದಲ್ಲಿ ಸೇವಿಸಬಹುದು.
ಕಾಲಾನಂತರದಲ್ಲಿ ಕಣ್ಣಿನ ಸ್ನಾಯುಗಳು ದುರ್ಬಲಗೊಳ್ಳುತ್ತದೆ. ಆಮ್ಲಾದ ನಿಯಮಿತ ಸೇವನೆಯು ಈ ಸ್ನಾಯುಗಳನ್ನು ಬಲಪಡಿಸಿ ದೃಷ್ಟಿಯನ್ನು ಉಳಿಸಲು ಸಹಾಯ ಮಾಡುತ್ತದೆ. ನೈಸರ್ಗಿಕವಾಗಿ ದೃಷ್ಟಿಯನ್ನು ಸುಧಾರಿಸಿಕೊಳ್ಳಲು, ಪ್ರತಿದಿನ ಆಮ್ಲಾ ಸೇವನೆ ಉತ್ತಮ ಆಯ್ಕೆಯಾಗಿದೆ.