ಮದುವೆಯ ನಂತರ, ಪ್ರತಿ ಹೆಣ್ಣಿಗೂ ಅತ್ತೆಯ ಮನೆ ಹೊಸ ಬದುಕಿನ ಹೊಸ ಅಧ್ಯಾಯವಾಗಿ ರೂಪುಗೊಳ್ಳುತ್ತದೆ. ಈ ಹೊಸ ಪರಿಸರಕ್ಕೆ ಹೊಂದಿಕೊಳ್ಳುವಲ್ಲಿ ಸೊಸೆಗೆ ಅನೇಕ ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧ ಸರಿಯಾಗಿ ಮೂಡಿಬಂದರೆ, ಅದು ಕೇವಲ ಕುಟುಂಬದ ಸಮತೋಲನವಷ್ಟೇ ಅಲ್ಲ, ಮನೆಯಲ್ಲಿ ಶಾಂತಿಯೂ ಸಹ ತರಬಹುದು. ಆದರೆ ಕೆಲವೊಮ್ಮೆ ಸಣ್ಣ ಅಸಮಾಧಾನಗಳೇ ದೊಡ್ಡ ಗೊಂದಲಕ್ಕೆ ಕಾರಣವಾಗಬಹುದು.
ಗಂಡನ ಮೇಲೆ ಹಕ್ಕು ಚಲಾಯಿಸುವುದು
ಮದುವೆಯ ಬಳಿಕ, ಕೆಲವೊಂದು ಹೆಂಡತಿಯರು ಗಂಡನ ಮೇಲೆ ತುಂಬಾ ಹಕ್ಕು ಚಲಾಯಿಸುತ್ತಾರೆ. ಗಂಡನ ಮೇಲೆ ಅತ್ತೆಯ ಕಾಳಜಿಯನ್ನೂ ಸಹಿಸಲು ಸಾಧ್ಯವಾಗದೆ, ಅತ್ತೆ-ಮಗನ ಸಂಬಂಧವನ್ನು ದುರ್ಬಲಗೊಳಿಸುತ್ತಾರೆ. ಇದು ಅತ್ತೆಯಲ್ಲಿ ಅಸಂತೋಷ ಹುಟ್ಟಿಸಲು ಸಾಧ್ಯತೆ ಹೆಚ್ಚು. ಇದಕ್ಕೆ ಮತ್ತೊಂದು ಕಾರಣ ಎಂದರೆ, ಮನೆಕೆಲಸಗಳಲ್ಲಿ ಆಸಕ್ತಿ ತೋರಿಸದಿರುವುದು. ಅತ್ತೆ ನಿರೀಕ್ಷಿಸುವಂತೆ ಸೊಸೆ ಮನೆಕೆಲಸದಲ್ಲಿ ಪಾಲ್ಗೊಳ್ಳದಿದ್ದರೆ, ಅತ್ತೆಗೆ ಅವಳು ಮನೆಯ ಜವಾಬ್ದಾರಿಯನ್ನು ನಿರ್ಲಕ್ಷಿಸುತ್ತಿದ್ದಾಳೆ ಎನ್ನುವ ಭಾವನೆ ಉಂಟಾಗುತ್ತದೆ.
ಭಿನ್ನ ಆಲೋಚನೆ
ಆಲೋಚನೆಗಳಲ್ಲಿ ಬರುವ ಭಿನ್ನತೆ. ಸೊಸೆ ಆಧುನಿಕತೆಯತ್ತ ಆಕರ್ಷಿತಳಾಗಿದ್ದರೆ, ಅತ್ತೆ ಪಾರಂಪರಿಕ ಪದ್ಧತಿಗಳಿಗೆ ಒತ್ತು ನೀಡುತ್ತಾರೆ. ಇದು ದಿನನಿತ್ಯದ ನಿರ್ಧಾರಗಳಲ್ಲಿ ಭಿನ್ನಾಭಿಪ್ರಾಯ ಹುಟ್ಟಿಸಲು ಕಾರಣವಾಗುತ್ತದೆ.
ಹೋಲಿಕೆ ಮಾಡುವುದು
ತಾಯಿಯ ಮನೆಯ ಜತೆ ಅತ್ತೆಯ ಮನೆಯ ಹೋಲಿಕೆ ಮಾಡುವುದು ಸಹ ತಪ್ಪಲ್ಲ, ಆದರೆ ಸದಾ ತಾಯಿಯ ಮನೆಯೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸುವುದು ಅತ್ತೆಯ ಮನಸ್ಸಿಗೆ ನೋವುಂಟುಮಾಡಬಹುದು. ಈ ಎಲ್ಲ ಅಂಶಗಳು ಅತ್ತೆ-ಸೊಸೆ ನಡುವೆ ಅಸಮಾಧಾನ ಹುಟ್ಟಿಸುವ ಮೂಲಕ ಕುಟುಂಬದ ಶಾಂತಿಗೆ ಧಕ್ಕೆಯುಂಟುಮಾಡಬಹುದು.
ಈ ಕಾರಣಗಳಿಂದಾಗಿ, ಅತ್ತೆ-ಸೊಸೆ ಸಂಬಂಧವು ಪರಸ್ಪರ ಗೌರವ, ತಿಳುವಳಿಕೆ ಮತ್ತು ಶ್ರದ್ಧೆಯಿಂದ ನಿರ್ವಹಿಸಿದರೆ ಮಾತ್ರ ಮನೆಯಲ್ಲಿ ಪ್ರೀತಿ ತುಂಬಿದ ವಾತಾವರಣ ನಿರ್ಮಾಣವಾಗುವುದು ಖಚಿತ.