ಗೃಹ ಆರೋಗ್ಯ ಯೋಜನೆ ಕಾರ್ಯಗಾರಕ್ಕೆ ಸಚಿವ ಡಿ.ಸುಧಾಕರ್ ಚಾಲನೆ

ಹೊಸದಿಗಂತ ಚಿತ್ರದುರ್ಗ

ರಾಜ್ಯ ಸರ್ಕಾರ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಿರುವ “ಗೃಹ ಆರೋಗ್ಯ” ಯೋಜನೆಯು ಮಹತ್ವಪೂರ್ಣವಾಗಿದ್ದು, ರೋಗಗಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ಶೀಘ್ರ ಚಿಕಿತ್ಸೆ ಕೊಡಿಸುವಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಹೇಳಿದರು.

“ಗೃಹ ಆರೋಗ್ಯ” ಯೋಜನೆ ಕುರಿತಂತೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕೇಂದ್ರದ ಸಹಾಯಕಿಯರಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತು ಶ್ರೇಷ್ಠ. ಒತ್ತಡದ ಜೀವನದಲ್ಲಿ ಜನರು ನೂರಾರು ಕಾಯಿಲೆಗಳ ನಡುವೆ ಬದುಕು ಸಾಗಿಸುತ್ತಿದ್ದಾರೆ. ಕಾಯಿಲೆಗಳು ಬಂದಿದ್ದರೂ, ಪ್ರಾಥಮಿಕ ಹಂತದಲ್ಲಿ ಗುರುತಿಸದೆ, ಮಾರಣಾಂತಿಕವಾದ ಬಳಿಕ ಚಿಕಿತ್ಸೆಗೆ ಪರದಾಡುವುದನ್ನು ಗಮನಿಸುತ್ತಿದ್ದೇವೆ. ಇಂತಹ ಸ್ಥಿತಿಯಿಂದ ಜನಸಾಮಾನ್ಯರನ್ನು ಪಾರು ಮಾಡುವ ಸಲುವಾಗಿ ಸರ್ಕಾರ ಉತ್ತಮ ಯೋಜನೆ ಜಾರಿಗೊಳಿಸಿದ್ದು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ವಿವಿಧ ರೋಗಗಳನ್ನು ಗುರುತಿಸುವಂತಹ “ಗೃಹ ಆರೋಗ್ಯ” ಯೋಜನೆಯನ್ನು ಕಳೆದ ವರ್ಷ ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿತ್ತು ಎಂದರು.
ಈ ಯೋಜನೆ ಯಶಸ್ವಿಗೊಂಡಿದ್ದರಿಂದ ಇದೀಗ ನಮ್ಮ ಸರ್ಕಾರ ಇಡೀ ರಾಜ್ಯಕ್ಕೆ ಗೃಹ ಆರೋಗ್ಯ ಯೋಜನೆಯನ್ನು ವಿಸ್ತರಿಸಲಾಗಿದೆ. ಇದರ ಜೊತೆಗೆ ಮಧುಮೇಹ, ರಕ್ತದೊತ್ತಡ, ವಿವಿಧ ಬಗೆಯ ಕ್ಯಾನ್ಸರ್ ಸೇರಿದಂತೆ ೧೪ ಬಗೆಯ ರೋಗ ಪತ್ತೆಹಚ್ಚುವ ಕಾರ್ಯಕ್ರಮ ಜಾರಿಗೊಳಿಸಿದೆ. ಆಶಾ ಕಾರ್ಯಕತೆರ್ಯರು ಮನೆ ಮನೆ ಭೇಟಿ ನೀಡಿ, ಆರೋಗ್ಯ ಇಲಾಖೆ ನಿಗದಿಪಡಿಸಿರುವ ಪ್ರಶ್ನಾವಳಿಗಳು, ರೋಗ ಲಕ್ಷಣಗಳ ಮೂಲಕ ರೋಗಗಳನ್ನು ಪತ್ತೆ ಹಚ್ಚಿ, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲು ನೆರವಾಗುವಂತೆ ಸಚಿವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ಕಾಯಿಲೆಯನ್ನು ಆರಂಭಕ್ಕೂ ಮುನ್ನ ಪ್ರಾಥಮಿಕವಾಗಿ ಗುರುತಿಸಿ, ಗುಣಪಡಿಸುವುದು ಮಹತ್ವದ್ದಾಗಿದೆ. ಕಾಯಿಲೆಗಳು ಸುಪ್ತವಾಗಿದ್ದು, ಮನುಷ್ಯನ ಜೀವಕ್ಕೆ ಕಂಟಕವಾಗುವ ಅನೇಕ ನಿದರ್ಶನಗಳಿವೆ. ಗ್ರಾಮಗಳಲ್ಲಿ ಆರೋಗ್ಯ ಸೇವೆ, ತಪಾಸಣೆ, ಚಿಕಿತ್ಸೆ ಪಡೆಯುವ ಬಗ್ಗೆ ಜಾಗೃತಿಯ ಕೊರತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸಿದ್ದು, ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಹೆಚ್‌ಒ ಡಾ|| ರೇಣುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಗೃಹ ಆರೋಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ೩೦ ವರ್ಷ ಮೇಲ್ಪಟ್ಟ ಸುಮಾರು ೬.೫೯ ಲಕ್ಷ ಜನರ ಆರೋಗ್ಯ ತಪಾಸಣೆ ಮಾಡುವ ಗುರಿ ಹೊಂದಲಾಗಿದ್ದು, ರಾಜ್ಯದಲ್ಲಿ ಶೇ. ೨೫ ರಷ್ಟು ಜನರಲ್ಲಿ ರಕ್ತದೊತ್ತಡ, ಶೇ. ೧೪ ರಷ್ಟು ಜನರಲ್ಲಿ ಮಧುಮೇಹ ಇರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಜಿಲ್ಲೆಯಲ್ಲಿ ರೋಗಗಳ ಪತ್ತೆಗಾಗಿ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಅವರು ಒಟ್ಟು ೧೪ ಬಗೆಯ ರೋಗಗಳನ್ನು ಪತ್ತೆಹಚ್ಚುವ ಕಾರ್ಯ ಮಾಡಲಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗಾಗಿ ಸಿದ್ಧಪಡಿಸಲಾಗಿರುವ ಗೃಹ ಆರೋಗ್ಯ ಯೋಜನೆಯ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಜಿ.ಪಂ. ಸಿಇಒ ಡಾ.ಎಸ್.ಆಕಾಶ್, ಕೂಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಜಿ.ಪಂ. ಉಪಕಾರ್ಯದರ್ಶಿ ರಂಗಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|| ಕಂಬಾಳಿಮಠ ಸೇರಿದಂತೆ ಆರೋಗ್ಯ ಇಲಾಖೆಯ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!