ಹೊಸದಿಗಂತ ಡಿಜಿಟಲ್ ಡೆಸ್ಕ್:
ವೇತನ ಹಿಂಬಾಕಿ, ವೇತನ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ಸರ್ಕಾರ ಜತೆ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಇದರ ನಡುವೆ ನೌಕರರ ಮುಷ್ಕರವನ್ನು 1 ದಿನ ತಡೆ ಹಿಡಿಯುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅದರ ಹೊರತಾಗಿಯೂ ಪಟ್ಟು ಬಿಡದ ಸಾರಿಗೆ ನೌಕರರು ಮಂಗಳವಾರ ಬೆಳಗ್ಗೆಯಿಂದಲೇ ಮುಷ್ಕರವನ್ನು ಆರಂಭಿಸಿದೆ.
ಸಾರಿಗೆ ನೌಕರರ ಮುಷ್ಕರದ ಪರಿಣಾಮ ರಾಜ್ಯಾದ್ಯಂತ ಬಸ್ಸುಗಳ ಸೇವೆ ವ್ಯತ್ಯಯವಾಗಿ ಹಲವಾರು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಸದ್ಯ ಜನರು ಖಾಸಗಿ ಬಸ್ಗಳ ಮೊರೆ ಹೋಗಿದ್ದಾರೆ. ಹೀಗಿದ್ದರೂ, ಯಾವುದೇ ಚಿಂತೆ ಬೇಡ ಎಂದು ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಅಭಯ ನೀಡಿದೆ, ಸಾರಿಗೆ ನಿಗಮಗಳು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಂಡಿವೆ ಎಂದು ತಿಳಿಸಿದೆ.
ರಾಜ್ಯ ಸರ್ಕಾರದ ಈ ಸೂಚನೆ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸಾರಿಗೆ ನಿಗಮಗಳು ಮಾಡಿಕೊಂಡಿವೆ. ನಾಲ್ಕೂ ನಿಗಮಗಳಲ್ಲಿ ಸುಮಾರು 1,700 ಎಲೆಕ್ನಿಕ್ ಬಸ್ಗಳು ಸೇವೆ ನೀಡುತ್ತಿವೆ. ಅದರಲ್ಲಿ ಬಿಎಂಟಿಸಿ ಒಂದರಲ್ಲೇ 1,500 ಎಲೆಕ್ನಿಕ್ ಬಸ್ಗಳು ಸಂಚರಿಸುತ್ತಿವೆ. ಆ ಬಸ್ ಗಳಲ್ಲಿ ಖಾಸಗಿ ಚಾಲಕರನ್ನು ನಿಯೋಜಿಸಲಾಗಿದೆ. ಆ ಚಾಲಕರು ಸಾರಿಗೆ ನೌಕರರ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದ್ದರಿಂದ ಎಲೆಕ್ಟಿಕ್ ಬಸ್ಗಳು ಮುಷ್ಕರದ ಸಂದರ್ಭದಲ್ಲಿ ಸೇವೆ ನೀಡಲಿವೆ.