ದೈಹಿಕ ಹಾಗೂ ಮಾನಸಿಕ ಆರೋಗ್ಯ ಉಳಿಸಿಕೊಳ್ಳಲು ಸಮರ್ಪಕ ನಿದ್ರೆ ಅತ್ಯಗತ್ಯವಾಗಿದೆ ಎಂದು ತಜ್ಞರು ಹೇಳುತ್ತಾರೆ. ಹೆಚ್ಚು ಅಥವಾ ಕಡಿಮೆ ನಿದ್ರೆ ಎರಡೂ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಪ್ರತಿದಿನದ ಒತ್ತಡ ಹಾಗೂ ಕಾರ್ಯಭಾರ ದೇಹದ ಮೇಲೆ ಪರಿಣಾಮ ಬಿರುವುದರಿಂದ, ಕನಿಷ್ಠ ಏಳುರಿಂದ ಎಂಟು ಗಂಟೆಗಳ ನಿದ್ರೆ ಅಗತ್ಯವೆಂದು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ನಿದ್ರಾಹೀನತೆ ದೇಹದ ರೋಗ ಪ್ರತಿರೋಧಕ ಶಕ್ತಿಯನ್ನು ಕುಂಠಿತಗೊಳಿಸಿ, ಶರೀರದ ಗ್ಲೂಕೋಸ್ ನಿಯಂತ್ರಣ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಮಧುಮೇಹ, ಹೃದಯಾಘಾತ, ಬೊಜ್ಜು ಹಾಗೂ ಖಿನ್ನತೆ ಮುಂತಾದ ಕಾಯಿಲೆಗಳ ಅಪಾಯವಿದೆ. ಆದ್ದರಿಂದ, ಉತ್ತಮ ನಿದ್ರೆ ಆರೋಗ್ಯಕರ ಜೀವನಕ್ಕೆ ಅಸ್ತ್ರವಾಗಿ ಪರಿಣಮಿಸುತ್ತದೆ.
ಭಾರತೀಯ ಆಯುರ್ವೇದದಲ್ಲಿ ಉಲ್ಲೇಖವಾದ ಕೆಲವು ಮಸಾಲೆಗಳು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ನೆರವಾಗುತ್ತವೆ. ಅವು ಯಾವುವು ಎಂದು ನೋಡೋಣ.
ಜೀರಿಗೆ: ಇದು ಜೀರ್ಣಕ್ರಿಯೆ ಸುಧಾರಿಸಿ, ನಿದ್ರೆಯನ್ನು ಪ್ರೇರೇಪಿಸುತ್ತದೆ. ಜೀರಿಗೆಯನ್ನು ಆಹಾರದಲ್ಲಿ ಬಳಸುವುದರಿಂದ ಆಸಿಡ್ ರಿಫ್ಲಕ್ಸ್ ಕಡಿಮೆಯಾಗುತ್ತದೆ ಹಾಗೂ ಮನಸ್ಸು ಶಾಂತಗೊಳ್ಳುತ್ತದೆ.
ಪುದೀನಾ ಎಲೆಗಳು: ಪುದೀನದಲ್ಲಿರುವ ಮೆಂಥಾಲ್ ಎಲಿಮೆಂಟ್ ಸ್ನಾಯುಗಳನ್ನು ಸಡಿಲಗೊಳಿಸುವ ಶಕ್ತಿಯಿದೆ. ಮಲಗುವ ಮೊದಲು ಪುದೀನಾ ಟೀ ಸೇವನೆಯು ಉತ್ತಮ ನಿದ್ರೆಗೆ ಸಹಾಯಕವಾಗುತ್ತದೆ.
ಜಾಯಿಕಾಯಿ: ಜಾಯಿಕಾಯಿಯು ನರವ್ಯವಸ್ಥೆ ಶಮನಗೊಳಿಸಿ, ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಒಂದು ಚಿಟಿಕೆ ಜಾಯಿಕಾಯಿ ಪುಡಿಯನ್ನು ಬಿಸಿ ಹಾಲಿನಲ್ಲಿ ಸೇರಿಸಿ ಕುಡಿಯುವದು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
ಅಶ್ವಗಂಧ: ಒತ್ತಡ ನಿವಾರಣೆಗೆ ಹೆಸರು ಮಾಡಿದ ಅಶ್ವಗಂಧ, ನಿದ್ರೆ ಪ್ರಚೋದಕವಾದ ಅಡಾಪ್ಟೋಜೆನ್ ಮೂಲಿಕೆಯಾಗಿದ್ದು, ಇದು ಆತಂಕ ಕಡಿಮೆ ಮಾಡಿ, ಉತ್ತಮ ನಿದ್ರೆ ನೀಡುತ್ತದೆ.
ಫೆನ್ನೆಲ್ ಬೀಜಗಳು: ಈ ಬೀಜಗಳು ನರವ್ಯವಸ್ಥೆ ಶಮನಗೊಳಿಸಿ ಸ್ನಾಯುಗಳ ವಿಶ್ರಾಂತಿಗೆ ಕಾರಣವಾಗುತ್ತವೆ. ಇದರಿಂದಾಗಿ ನಿದ್ರಾಹೀನತೆ, ಆತಂಕ ಮತ್ತು ಒತ್ತಡದಂತಹ ಸಮಸ್ಯೆಗಳ ನಿವಾರಣೆಗೆ ಸಹಕಾರಿ.
ಈ ಮಸಾಲೆಗಳ ಸಹಾಯದಿಂದ ದೈನಂದಿನ ಜೀವನದಲ್ಲಿ ನಿದ್ರೆಯ ಗುಣಮಟ್ಟ ಹೆಚ್ಚಿಸಿ, ಒತ್ತಡ ಮುಕ್ತ ಜೀವನ ನಡೆಸಲು ಸಾಧ್ಯ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)