ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಲನಚಿತ್ರರಂಗದ ಯುವ ನಟ ಸಂತೋಷ್ ಬಾಲರಾಜ್ ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಜಾಂಡೀಸ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯದ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದಂತೆ, ಇಂದು ಬೆಳಿಗ್ಗೆ 10 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು.
‘ಕರಿಯ-2’ ನಟನಿಗೆ ಅಂತಿಮ ವಿದಾಯ
ಚಲನಚಿತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿಕೊಂಡಿದ್ದ ಸಂತೋಷ್ ಬಾಲರಾಜ್, ‘ಗಣಪ’, ‘ಕರಿಯ-2’, ‘ಕೆಂಪ’, ‘ಬರ್ಕ್ಲಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಸ್ತಬ್ಧ ಚಲನಚಿತ್ರ ಶೈಲಿಯಿಂದ ಪ್ರೇಕ್ಷಕರ ಗಮನಸೆಳೆದಿದ್ದರು. ಅವರ ನಿಧನದ ಸುದ್ದಿ ಚಿತ್ರರಂಗದವರನ್ನು ಶೋಕಸಾಗರದಲ್ಲಿ ಮುಳುಗಿಸಿವೆ.
ಸಂತೋಷ್ ಬಾಲರಾಜ್ ಇನ್ನೂ ವಿವಾಹವಾಗಿರಲಿಲ್ಲ. ಕುಟುಂಬಸ್ಥರು ಮದುವೆ ಕುರಿತಾಗಿ ಚರ್ಚೆ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ, ಆರೋಗ್ಯ ತೀವ್ರವಾಗುತ್ತಿದ್ದ ಕಾರಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ದುರಂತವೆಂದರೆ, ಈ ಚಿಕಿತ್ಸೆ ಫಲಕಾರಿಯಾಗದೇ ಅವರು ಅಗಲಿದ್ದಾರೆ. ಸಂತೋಷ್ ಬಾಲರಾಜ್‌ಗೆ ತಾಯಿ ಮತ್ತು ಅಕ್ಕ ಇದ್ದಾರೆ. ಅವರ ತಂದೆ ಬಾಲರಾಜ್ ಅವರು ಕೂಡ ಒಂದೂವರೆ ವರ್ಷದ ಹಿಂದೆ ಇಹಲೋಕ ತ್ಯಜಿಸಿದ್ದರು. ಈಗ ಮಗನ ನಿಧನದಿಂದ ಕುಟುಂಬ ಇನ್ನಷ್ಟು ಆಘಾತಕ್ಕೊಳಗಾಗಿದೆ.
ಅವರ ಮ್ಯಾನೇಜರ್ ರಂಗಸ್ವಾಮಿ ಸಂತೋಷ್ ಬಾಲರಾಜ್ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ. ಆದರೆ ಅಂತ್ಯಕ್ರಿಯೆ ಯಾವಾಗ, ಎಲ್ಲಿ ನಡೆಯಲಿದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.