ತೂಕ ಹೆಚ್ಚಾಗೋದಕ್ಕೆ ನಾವು ಸಾಮಾನ್ಯವಾಗಿ ಆಹಾರಕ್ರಮವನ್ನೇ ಆರೋಪಿಸುತ್ತೇವೆ. ಆದರೆ ನಿಜವಾದ ಕಾರಣವೆಂದರೆ ಕೇವಲ ಆಹಾರ ಪದ್ಧತಿಯಲ್ಲ, ಕೆಲವೊಮ್ಮೆ ನಮ್ಮ ಮನಸ್ಥಿತಿಯೇ ಪ್ರಮುಖ ಪಾತ್ರವಹಿಸುತ್ತದೆ. ಆಯಾಸ, ಒತ್ತಡ, ಆತಂಕ, ಖಿನ್ನತೆ – ಇವುಗಳು ಸಹ ದೇಹದ ತೂಕದ ಮೇಲೆ ಪರಿಣಾಮ ಬೀರುತ್ತವೆ.
ಹೆಚ್ಚಿನ ಒತ್ತಡದಲ್ಲಿ ಇರುವವರು ಸಾಮಾನ್ಯವಾಗಿ ಜಂಕ್ ಫುಡ್ ಅಥವಾ ಸಿಹಿತಿಂಡಿಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ವ್ಯಾಯಾಮ ಮಾಡುವ ಮನಸ್ಥಿತಿ ಕಡಿಮೆಯಾಗುತ್ತದೆ. ದಿನಚರಿಯು ನಿಧಾನಗೊಳ್ಳುತ್ತದೆ. ಇದರ ಪರಿಣಾಮವಾಗಿ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತಾ ತೂಕ ವೃದ್ಧಿ ಕಾಣಿಸುತ್ತದೆ.
ಒತ್ತಡದ ಪರಿಣಾಮವಾಗಿ ಹಲವರು ಬೆಳಿಗ್ಗೆ ಉಪಹಾರವನ್ನು ಮಿಸ್ ಮಾಡುತ್ತಾರೆ. ಹೀಗಾಗಿ ಮಧ್ಯಾಹ್ನ ಅಥವಾ ಸಂಜೆ ಹೊತ್ತಿನಲ್ಲಿ ಜಾಸ್ತಿ ಆಹಾರ ಸೇವನೆಯಾಗುತ್ತದೆ. ಇದರಿಂದ ಬೊಜ್ಜು ತಕ್ಷಣ ಏರಿಕೆ ಕಾಣುತ್ತದೆ. ಇದಲ್ಲದೆ, ಕೆಲವರು ಭಾವನಾತ್ಮಕ ಒತ್ತಡವನ್ನು ತಗ್ಗಿಸಿಕೊಳ್ಳಲು ಅನೇಕ ಬಾರಿ ತಿನ್ನುವ ರೂಢಿಗೆ ಒಳಗಾಗುತ್ತಾರೆ.
ಅಂಥವರಿಗಾಗಿ ನೈಸರ್ಗಿಕ ಪರಿಹಾರಗಳೂ ಲಭ್ಯವಿವೆ. ಹಸಿರು ಚಹಾ (Green Tea), ನಿಂಬೆರಸ, ಜೇನುತುಪ್ಪ, ಕರಿಬೇವು, ಕರಿಮೆಣಸು, ಶುಂಠಿ ಇಂತಹ ಪದಾರ್ಥಗಳು ದೇಹದ ಚಯಾಪಚಯ ಕ್ರಿಯೆಯನ್ನು ಉತ್ತಮ ಪಡಿಸುವ ಮೂಲಕ ತೂಕ ಕಡಿಮೆ ಮಾಡುತ್ತವೆ. ವಾಸ್ತವವಾಗಿ, ಈ ಆಹಾರ ಪದಾರ್ಥಗಳಲ್ಲಿ ಇರುವ ಉತ್ತಮ ಅಂಶಗಳು ಕೊಬ್ಬನ್ನು ಕರಗಿಸಲು ಸಹಾಯಕವಾಗಿವೆ.
ಆದರೆ ಎಲ್ಲಕ್ಕಿಂತ ಮುಖ್ಯವಾದುದು ಮನದ ಶಾಂತಿ. ತೂಕವನ್ನ ಕಡಿಮೆ ಮಾಡಲು ಮೊದಲನೆಯದಾಗಿ ಮನಸ್ಸನ್ನು ನಿಯಂತ್ರಿಸುವುದು ಅಗತ್ಯ. ಇಲ್ಲದಿದ್ದರೆ ಎಷ್ಟು ಡೈಟ್ ಮಾಡಿದರೂ ಪ್ರಯೋಜನವಾಗದು ಎಂಬುದು ಸ್ಪಷ್ಟ.