ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ಕಮಲ್ ಹಾಸನ್ ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತಲೂ ಹೇಳಿಕೆಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ‘ಥಗ್ ಲೈಫ್’ ಸಿನಿಮಾ ಬಿಡುಗಡೆ ಸಮಯದಲ್ಲಿ ಕಮಲ್ ಹಾಸನ್ ಕನ್ನಡ ಭಾಷೆಯ ಉಗಮದ ಬಗ್ಗೆ ಆಡಿದ್ದ ಮಾತು ಭಾರಿ ವಿವಾದಕ್ಕೆ ಕಾರಣವಾಗಿತ್ತು.ಹೀಗಾಗಿ ‘ಥಗ್ ಲೈಫ್’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಲಿಲ್ಲ. ಆದರೆ ಇದೀಗ ಮತ್ತೊಮ್ಮೆ ಕಮಲ್ ಹಾಸನ್ ತಮ್ಮ ಮಾತಿನ ಕಾರಣಕ್ಕೆ ವಿವಾದದ ಕೇಂದ್ರವಾಗಿದ್ದಾರೆ.
ಕಮಲ್ ಹಾಸನ್ ಅವರು ಆಡಿರುವ ಮಾತಿಗೆ ಅವರ ರಾಜ್ಯದಲ್ಲಿಯೇ ವಿರೋಧ ವ್ಯಕ್ತವಾಗಿದೆ. ಮಾತ್ರವಲ್ಲದೆ ತಮಿಳುನಾಡಿನಲ್ಲಿ ಕಮಲ್ ಹಾಸನ್ ಅವರ ಸಿನಿಮಾಗಳಿಗೆ ನಿಷೇಧ ಹೇರುವಂತೆ ಒತ್ತಾಯ ಕೇಳಿ ಬರುತ್ತಿದೆ.
ಈ ಹಿಂದೆ ಕನ್ನಡ ಭಾಷೆಯ ಬಗ್ಗೆ ಮಾತನಾಡಿ ಕೈಸುಟ್ಟುಕೊಂಡಿದ್ದ ಕಮಲ್ ಹಾಸನ್ ಈ ಬಾರಿ ಧರ್ಮದ ಬಗ್ಗೆ ಮಾತನಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ತಮಿಳಿನ ಸ್ಟಾರ್ ನಟ ಸೂರ್ಯ ಅವರು ಅರಗಂ ಹೆಸರಿನ ಫೌಂಡೇಶನ್ ಹೊಂದಿದ್ದು, ಆ ಫೌಂಡೇಶನ್ ಮೂಲಕ 6700ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ ನಿಡಲಾಗಿದೆ. ಈ ಫೌಂಡೇಶನ್ ನೆರವು ಪಡೆದು 51 ಮಂದಿ ಡಾಕ್ಟರ್ಗಳಾಗಿದ್ದಾರೆ. ನೂರಾರು ಮಂದಿ ಎಂಜಿನಿಯರ್ಗಳು ಹಾಗೂ ಇತರೆ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಫೌಂಡೇಶನ್ನ 15ನೇ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಅತಿಥಿಯಾಗಿ ಭಾಗಿ ಆಗಿದ್ದರು.
ಕಾರ್ಯಕ್ರಮದಲ್ಲಿ ಸೂರ್ಯ ಅವರ ಈ ಮಹತ್ ಕಾರ್ಯವನ್ನು ಕೊಂಡಾಡಿದ ಕಮಲ್ ಹಾಸನ್, ಅದೇ ಕಾರ್ಯಕ್ರಮದಲ್ಲಿ ನೀಟ್ ವ್ಯವಸ್ಥೆಯನ್ನು ವಿರೋಧಿಸಿದರು.
‘ನೀಟ್, ಹೆಚ್ಚಿನ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಕೆಳಹಂತದಿಂದ ಬರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್ನ ಕನಸನ್ನು ನನಸಾಗಲು ಬಿಡುತ್ತಿಲ್ಲ. ಇದೇ ಕಾರಣಕ್ಕೆ ನಾವು ಅದನ್ನು ವಿರೋಧಿಸುತ್ತಾ ಬಂದಿದ್ದೇವೆ. ಈಗ ಯುದ್ಧ ನಡೆಯುತ್ತಿದೆ. ಈ ಯುದ್ಧವನ್ನು ಕೇವಲ ಶಿಕ್ಷಣದಿಂದ ಮಾತ್ರವೇ ಗೆಲ್ಲಲು ಸಾಧ್ಯ. ಸರಪಳಿಗಳನ್ನು ಒಡೆಯುವ ಆಯುಧ ಶಿಕ್ಷಣವೊಂದೇ, ಸರ್ವಾಧಿಕಾರಿ ಹಾಗೂ ಸನಾತನವನ್ನು ಸೋಲಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರವೇ ಇದೆ’ ಎಂದಿದ್ದಾರೆ ಕಮಲ್ ಹಾಸನ್.
ಇದೀಗ ತಮಿಳುನಾಡು ಬಿಜೆಪಿಯು ಕಮಲ್ ಹಾಸನ್ ಅವರ ಈ ಹೇಳಿಕೆಯನ್ನು ವಿರೋಧಿಸಿದ್ದು, ಕಮಲ್ ಹಾಸನ್ ಸನಾತನ ಧರ್ಮವನ್ನು ಮುಗಿಸಲು ಮುಂದಾಗಿದ್ದಾರೆ. ರಾಜ್ಯದಲ್ಲಿ ಕಮಲ್ ಹಾಸನ್ ಸಿನಿಮಾಗಳಿಗೆ ನಿಷೇಧ ಹೇರಬೇಕು ಎಂದಿದ್ದಾರೆ.