ಹೊಸದಿಗಂತ ವರದಿ ಮಡಿಕೇರಿ:
ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿರುವ ಘಟನೆ ಕೊಡಗಿನ ಗಡಿ ಭಾಗವಾದ ಚೆoಬು ಗ್ರಾಮದ ದಬ್ಬಡ್ಕ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ಕೊಪ್ಪದ ಶಿವಪ್ಪ (72) ಎಂಬವರೇ ಸಾವಿಗೀಡಾದವರಾಗಿದ್ದಾರೆ.
ಬುಧವಾರ ರಾತ್ರಿ 8:30ರ ಸುಮಾರಿಗೆ ಕೊಪ್ಪದ ಶಿವಪ್ಪ ಅವರು ತಮ್ಮ ಮನೆಯ ಮುಂಭಾಗದಲ್ಲಿ ಸದ್ದು ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯಿಂದ ಹೊರಬಂದು ಮನೆಯ ಮುಂಭಾಗದಿಂದ 30 ಮೀಟರ್ ದೂರ ನಡೆದು ಕೊಂಡು ಹೋದಾಗ ಕಾಡಾನೆ ದಿಢೀರ್ ದಾಳಿ ನಡೆಸಿರುವುದಾಗಿ ಹೇಳಲಾಗಿದೆ.
ಆನೆ ದಾಳಿಯಿಂದ ಎದೆ ಭಾಗ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವ ಸಂದರ್ಭ ಶಿವಪ್ಪ ಸಾವಿಗೀಡಾಗಿದ್ದಾರೆ.
ಸುದ್ದಿ ತಿಳಿದೊಡನೆ ಶಾಸಕ ಎ. ಎಸ್. ಪೊನ್ನಣ್ಣ ಅವರ ಸೂಚನೆ ಮೇರೆಗೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಅವರು ಶವವನ್ನು ಇರಿಸಿದ್ದ ಸಂಪಾಜೆ ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಆನೆ ಹಾವಳಿಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದಾಗ ಅವರನ್ನು ಸಮಾಧಾನಪಡಿಸಿದ ಸಂಕೇತ್ ಅವರು, ಶಾಸಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪರಿಣಾಮ ಕೂಡಲೇ ಆ ಭಾಗದಲ್ಲಿರುವ ಒಂದು ಪುಂಡಾನೆಯನ್ನು ಹಿಡಿಯಲು ಬೇಕಾದ ಅರಣ್ಯ ಇಲಾಖೆಯ ಕ್ರಮಗಳನ್ನು ಪೂರೈಸಿ ಶೀಘ್ರವೇ ಆನೆ ಹಿಡಿಯಲು ಅನುಮತಿ ಕೊಡಿಸಿ ಕೊಡುವುದಾಗಿ ಪೊನ್ನಣ್ಣ ಭರವಸೆ ನೀಡಿರುವುದಾಗಿ ಎಂದು ಸಂಕೇತ್ ಪೂವಯ್ಯ ತಿಳಿಸಿದ್ದಾರೆ.
ಆನೆ ಓಡಿಸುವ ಕಾರ್ಯಾಚರಣೆ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಿರುವ ಶಾಸಕರು ಅರಣ್ಯ ಇಲಾಖೆಗೆ ಹೆಚ್ಚು ಸಿಬ್ಬಂದಿ ಒದಗಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಗ್ರಾಮಸ್ಥರಿಗೆ ಸಂಕೇತ್ ಪೂವಯ್ಯ ತಿಳಿಸಿದರು.