ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಜಯಭೇರಿ ಬಾರಿಸಿದ ನಂತರ, ಪಾಕಿಸ್ತಾನದ ಮಾಜಿ ವೇಗಿ ಶಬ್ಬಿರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಟೀಮ್ ಇಂಡಿಯಾ ವ್ಯಾಸಲೀನ್ ಉಪಯೋಗಿಸಿ ಚೆಂಡನ್ನು ಹೊಳೆಯುವಂತೆ ಮಾಡಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದು, ಇದೀಗ ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶಬ್ಬಿರ್ ಅವರ ಪ್ರಕಾರ, 80 ಓವರ್ಗಳ ನಂತರವೂ ಭಾರತೀಯ ವೇಗಿಗಳು ಬಳಸಿದ ಚೆಂಡು ಹೊಸದಂತೆ ಹೊಳೆಯುತ್ತಿತ್ತು. ಈ ಕುರಿತು ಅಂಪೈರ್ಗಳು ಶಂಕೆ ವ್ಯಕ್ತಪಡಿಸಬೇಕಿತ್ತು. ಅಲ್ಲದೇ, ಈ ಚೆಂಡು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಭಾರತೀಯ ಬೌಲರ್ಗಳು ವ್ಯಾಸಲೀನ್ ಬಳಸಿ, ಚೆಂಡಿನ ಒಂದು ಬದಿಯನ್ನು ಹೊಳೆಯುವಂತೆ ಮಾಡಿ ಅದರಿಂದ ಸ್ವಿಂಗ್ ಪಡೆಯುತ್ತಿದ್ದಾರೆ ಎಂಬುದಾಗಿ ಅವರು ಆರೋಪಿಸಿದ್ದಾರೆ.
ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಆರು ರನ್ ಅಂತರದಿಂದ ಗೆಲುವು ಸಾಧಿಸಿದ ಹಿನ್ನೆಲೆ, ಕೊನೆಯ ದಿನದಾಟದಲ್ಲಿ ಮೊಹಮ್ಮದ್ ಸಿರಾಜ್ 3 ಪ್ರಮುಖ ವಿಕೆಟ್ ತೆಗೆದು ಭಾರತಕ್ಕೆ ಜಯ ತಂದುಕೊಟ್ಟರು. ಈ ಗೆಲುವಿನ ಬಳಿಕ ಶಬ್ಬಿರ್ ಅಹ್ಮದ್ ಇಂತಹ ಆರೋಪ ಮಾಡಿದ್ದು ಗಮನಸೆಳೆಯುತ್ತಿದೆ.
ಈಗಾಗಲೇ ಅವರ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗಿದ್ದು, ಭಾರತೀಯ ಅಭಿಮಾನಿಗಳು ಹಾಗೂ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿದೆ. ಕೆಲವರು ಶಬ್ಬಿರ್ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ, ಇನ್ನೂ ಕೆಲವರು ಅದನ್ನು ಸೋಲಿನ ಬೇಸರದಿಂದ ಮಾಡಿದ ದೂರೆಂದು ಹೇಳುತ್ತಿದ್ದಾರೆ.
ಈ ಹಿಂದೆ ಏಕದಿನ ವಿಶ್ವಕಪ್ನಲ್ಲಿ ಭಾರತೀಯ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದಾಗ ಪಾಕಿಸ್ತಾನದ ಕೆಲ ಮಾಜಿ ಆಟಗಾರರು ಬಿಸಿಸಿಐ ಚೆಂಡಿನಲ್ಲಿ ಚಿಪ್ ಅಳವಡಿಸಿದೆ ಎಂದು ಆರೋಪಿಸಿದ್ದರು. ಇಂತಹ ಆರೋಪಗಳಿಗೆ ಖುದ್ದು ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಂ ಆಕ್ರೋಶ ವ್ಯಕ್ತಪಡಿಸಿ ಕ್ಲಾಸ್ ತೆಗೆದುಕೊಂಡಿದ್ದರು.
ಹೀಗಾಗಿ, ಟೀಮ್ ಇಂಡಿಯಾ ಪರಿ ಶಿಸ್ತಿನಿಂದ ಆಟವಾಡಿದರೆ, ಕೆಲವು ವಿರುದ್ಧ ಧ್ವನಿಗಳು ಕೇಳಿಬರುವುದು ಸಹಜ. ಆದರೆ ಈ ಆರೋಪಕ್ಕೆ ತಾಳಮೇಳವಿಲ್ಲ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ.