ಹುಣಸೆಹಣ್ಣು-ಬೆಳ್ಳುಳ್ಳಿ ರಸಂ: ಆರೋಗ್ಯಕ್ಕೂ ಉತ್ತಮ, ಮಾಡೋದು ಸುಲಭ!
ಇತ್ತೀಚೆಗೆ ವೈರಲ್ ಜ್ವರಗಳು, ಶೀತ-ಗಂಟಲು ನೋವು, ಉಸಿರಾಟದ ತೊಂದರೆಗಳು ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಪ್ರತಿದಿನದ ಆಹಾರದಲ್ಲಿ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವಂತಹ ಪದಾರ್ಥಗಳನ್ನು ಸೇರಿಸಿಕೊಳ್ಳುವುದು ಅನಿವಾರ್ಯ. ಮನೆಯಲ್ಲೇ ತಯಾರಿಸಬಹುದಾದ, ಸುಲಭ ಮತ್ತು ಪೋಷಕಾಂಶಗಳಿಂದ ತುಂಬಿರುವ ‘ಹುಣಸೆಹಣ್ಣು-ಬೆಳ್ಳುಳ್ಳಿ ರಸಂ’ ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಆಯ್ಕೆಯಾಗಿದೆ.
ಬೇಕಾಗುವ ಸಾಮಗ್ರಿಗಳು:
ಹುಣಸೆ ಹಣ್ಣಿನ ತಿರುಳು – 2 ಚಮಚ
ಟೊಮ್ಯಾಟೋ- 2
ಕರಿಬೇವು- ಸ್ವಲ್ಪ
ಕಾಳು ಮೆಣಸು- 1 ಚಮಚ
ಬೆಳ್ಳುಳ್ಳಿ-4
ಅರಿಶಿಣ ಪುಡಿ- ಸ್ವಲ್ಪ
ಒಣ ಮೆಣಸಿನಕಾಯಿ- 2
ರುಚಿಗೆ ತಕ್ಕಷ್ಟು ಉಪ್ಪು
ಜೀರಿಗೆ- 1 ಚಮಚ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಅಡುಗೆ ಎಣ್ಣೆ
ಸಾಸಿವೆ- ಸ್ವಲ್ಪ
ಮಾಡುವ ವಿಧಾನ:
ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಜೀರಿಗೆ, ಕಾಳು ಮೆಣಸು, ಬೆಳ್ಳುಳ್ಳಿ, ಒಣ ಮೆಣಸಿನಕಾಯಿ ಮತ್ತು ಕರಿಬೇವು ಎಲೆಗಳನ್ನು ಹುರಿದು ಮಿಕ್ಸರ್ನಲ್ಲಿ ರುಬ್ಬಿಕೊಳ್ಳಿ. ಮತ್ತೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಟೊಮೆಟೊ, ಅರಿಶಿಣ ಪುಡಿ, ಹುಣಸೆಹಣ್ಣು ತಿರುಳು ಮತ್ತು ರುಬ್ಬಿದ ಮಸಾಲೆ ಸೇರಿಸಿ ಬೇಯಿಸಿ. ಕೊನೆಗೆ ಒಗ್ಗರಣೆಗೆ ಸಾಸಿವೆ, ಒಣ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ರಸಂಗೆ ಸೇರಿಸಿ.
ಈ ರಸಂ ಬಿಸಿಯಾಗಿಯೇ ಸೇವಿಸಿದರೆ ಗಂಟಲು ನೋವು, ಜ್ವರದ ಲಕ್ಷಣ ಹಾಗೂ ಶೀತ ಕಡಿಮೆಯಾಗುತ್ತದೆ. ಅನ್ನದ ಜೊತೆಗೆ ಅಥವಾ ಕೇವಲ ಸೂಪ್ ನಂತೆಯೂ ಕುಡಿಯಬಹುದು.