ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಬಂಧ ತನಿಖೆ ಮಾಡಲು ಹೇಳಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರದಲ್ಲಿ ಗುರುವಾರ ಮಾತನಾಡಿದ ಅವರು, ಅಲ್ಲಿನ ಜನಸಮುದಾಯ ಎಸ್ಐಟಿ ಮಾಡಲು ಒತ್ತಾಯಿಸಿದ್ದರು. ಬಹಳ ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಎಸ್ಐಟಿ ರಚಿಸಿದ್ದೇವೆ. ಅನಾಮಿಕ ವ್ಯಕ್ತಿ ಇಲ್ಲಿ ಕೊಲೆಯಾಗಿದೆ, ನಾನೇ ಅನೇಕ ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೆ ನೀಡಿದ್ದ. ಆ ವ್ಯಕ್ತಿ, ಮ್ಯಾಜಿಸ್ಟ್ರೇಟರ್ ಮುಂದೆ 164 ಹೇಳಿಕೆ ನೀಡಿದ್ದ. ಆತನ ಹೇಳಿಕೆ ಆಧರಿಸಿ ತನಿಖೆ ಮಾಡಬೇಕು ಎಂದು ಮ್ಯಾಜಿಸ್ಟ್ರೀಯಲ್ ಸೂಚನೆಯೂ ಇತ್ತು. ನಾವು ಕೂಡ ಸಾರ್ವಜನಿಕವಾಗಿ ಗಂಭೀರವಾಗಿ ಪರಿಗಣಿಸಿ ಎಸ್ಐಟಿ ಮಾಡಿದ್ದೇವೆ ಎಂದು ತಿಳಿಸಿದರು.
ಎರಡು ಗುಂಪುಗಳ ಮಧ್ಯೆ ನಿನ್ನೆ ದಿನ ಘರ್ಷಣೆಯಾಗಿದೆ. ದೂರು, ಪ್ರತಿದೂರು ಕೊಟ್ಟಿದ್ದಾರೆ. ಎಫ್ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ. ಅದನ್ನ ತನಿಖೆ ಮಾಡುತ್ತಾರೆ. ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಎಸ್ಐಟಿ ಹಾಗೂ ಸ್ಥಳೀಯ ಪೊಲೀಸರು ಮಾಡುತ್ತಾರೆ ಎಂದು ತಿಳಿಸಿದರು.
ಧರ್ಮಸ್ಥಳದ ವಿಚಾರದಲ್ಲಿ ಯಾರೋ ಹೇಳಿಕೆ ಕೊಡುತ್ತಾರೆ ಅದು ನಮಗೆ ಮುಖ್ಯವಲ್ಲ. ಎಸ್ಐಟಿಯವರು ತನಿಖೆಯನ್ನು ತಾಂತ್ರಿಕವಾಗಿ ಮತ್ತು ಆಧುನಿಕವಾಗಿ ಸತ್ಯ ಹೊರಗೆ ಬರುವ ರೀತಿಯಲ್ಲಿ ಮಾಡಬೇಕು. ಆ ಕೆಲಸವನ್ನು ಎಸ್ಐಟಿ ಮಾಡುತ್ತದೆ. ಅವರನ್ನು ಈಗಲೇ ಪ್ರಶ್ನೆ ಮಾಡಿದರೆ ತನಿಖೆಗೆ ಅರ್ಥ ಬರುವುದಿಲ್ಲ ಎಂದರು.