ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾತಂತ್ರ್ಯ ಅಂಗವಾಗಿ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ(MYAS) ರಾಷ್ಟ್ರ ಧ್ವಜದ ಕುರಿತು ಆನ್‌ಲೈನ್ ರಸಪ್ರಶ್ನೆ ಆಯೋಜಿಸಿದ್ದು, ಇದರಲ್ಲಿ 21 ರಿಂದ 29 ವರ್ಷ ವಯಸ್ಸಿನವರು ಭಾಗವಹಿಸಬಹುದಾಗಿದೆ. ಜೊತೆಗೆ ಈ ಕ್ವಿಜ್ ನಲ್ಲಿ 25ಕ್ಕಿಂತ ಹೆಚ್ಚು ಅಂಕ ಗಳಿಸಿದ ಸ್ಪರ್ಧಿಗಳು, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಸಿಯಾಚಿನ್‌ಗೆ ಭೇಟಿ ನೀಡುವ ಅವಕಾಶ ಪಡೆಯಲಿದ್ದಾರೆ.
ಸಚಿವಾಲಯದ ಪ್ರಕಾರ, ಈ ರಸಪ್ರಶ್ನೆಯು ‘ದೇಶಭಕ್ತಿಯನ್ನು ಬೆಳೆಸುತ್ತದೆ ಮತ್ತು ಭಾರತದ ರಾಷ್ಟ್ರ ಧ್ವಜದ ಬಗ್ಗೆ ಜಾಗೃತಿ ಮೂಡಿಸುತ್ತದೆ’. “MYBharat ಪೋರ್ಟಲ್ (mybharat.gov.in) ನಲ್ಲಿ ಆಯೋಜಿಸಲಾದ ಈ ಆನ್‌ಲೈನ್ ಕ್ವಿಜ್ ನಲ್ಲಿ 21 ರಿಂದ 29 ವರ್ಷದ ಎಲ್ಲಾ ನಾಗರಿಕರು ಭಾಗವಹಿಸಲು ಮತ್ತು ತ್ರಿವರ್ಣ ಧ್ವಜದ ಬಗ್ಗೆ ತಮ್ಮ ಜ್ಞಾನ ಪರೀಕ್ಷಿಸಲು ಆಹ್ವಾನಿಸುತ್ತದೆ” ಎಂದು ಸಚಿವಾಲಯ ತಿಳಿಸಿದೆ.
ಸಿಯಾಚಿನ್ ಭೇಟಿಗೆ ವಿಜೇತರ ಆಯ್ಕೆಯು 21 ರಿಂದ 29 ವರ್ಷದೊಳಗಿನ ಯುವಕರಿಗೆ ಸೀಮಿತವಾಗಿರುತ್ತದೆ. ಟಾಪ್ ಸ್ಕೋರರ್‌ಗಳಲ್ಲಿ ಅಂತಿಮವಾಗಿ 25 ವಿಜೇತರನ್ನು ಕಂಪ್ಯೂಟರ್ ಆಧಾರಿತ ಲಾಟರಿ ವ್ಯವಸ್ಥೆಯ ಮೂಲಕ ಆಯ್ಕೆ ಮಾಡಲಾಗುತ್ತದೆ’ ಎಂದು ಸಚಿವಾಲಯ ತಿಳಿಸಿದೆ.