ಬಿಸಿಬಿಸಿ, ರುಚಿಕರ ಹಾಗೂ ಆರೋಗ್ಯಕರವಾದ ಉಪಹಾರ ಮಾಡುವ ಯೋಚನೆಗೆ ತಾಯಿಯಂದಿರಿಗೆ ಪ್ರತಿದಿನ ಬೆಳಗ್ಗೆ ಇದ್ದೆ ಇರುತ್ತೆ. ಇಂತಹ ಸಂದರ್ಭದಲ್ಲಿ ತ್ವರಿತವಾಗಿ ಮಾಡಬಹುದಾದ ಗೋಧಿ ಮಸಾಲ ಪಡ್ಡು ಉತ್ತಮ ಆಯ್ಕೆಯಾಗಿದೆ. ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಈ ಪಡ್ಡು ತಯಾರಿಸುವ ವಿಧಾನವೂ ಅಷ್ಟೇ ಸುಲಭವಾಗಿದೆ.
ಬೇಕಾಗುವ ಪದಾರ್ಥಗಳು:
ಗೋಧಿ ನುಚ್ಚು – 250 ಗ್ರಾಂ
ಕತ್ತರಿಸಿದ ಈರುಳ್ಳಿ – 1 ಕಪ್
ಕತ್ತರಿಸಿದ ಸಬ್ಸಿಗೆ ಸೊಪ್ಪು – 1 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಹಸಿ ಮೆಣಸಿನಕಾಯಿ – 4
ನೆನೆಸಿಟ್ಟ ಉದ್ದಿನ ಬೆಳೆ – 1 ಕಪ್
ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವು – 1/2 ಕಪ್
ಎಣ್ಣೆ
ಮಾಡುವ ವಿಧಾನ:
ಮೊದಲು ಗೋಧಿ ನುಚ್ಚನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ನಂತರ 20 ನಿಮಿಷಗಳ ಕಾಲ ಅದನ್ನು ನೀರಿನಲ್ಲಿ ನೆನೆಸಿಡಿ. ಇದರ ನಡುವೆಯೇ ನೆನೆಸಿಟ್ಟ ಉದ್ದಿನ ಬೆಳೆಯನ್ನು ಮೃದುವಾಗಿ ರುಬ್ಬಿಕೊಳ್ಳಿ. ಇದರೊಂದಿಗೆ ನೀರಿನಿಂದ ಬೇರ್ಪಡಿಸಿದ ಗೋಧಿ ನುಚ್ಚು ಸೇರಿಸಿ ಉಪ್ಪು ಹಾಕಿ ಚೆನ್ನಾಗಿ ಕಲಸಿ, ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಕನಿಷ್ಠ 5 ರಿಂದ 8 ಗಂಟೆಗಳವರೆಗೆ ನೆನೆಯಲು ಬಿಡಬೇಕು.
ನೆನೆಸಿದ ಮಿಶ್ರಣಕ್ಕೆ ಈರುಳ್ಳಿ, ಸಬ್ಸಿಗೆ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವು ಸೇರಿಸಿ ಪುನಃ ಚೆನ್ನಾಗಿ ಮಿಕ್ಸ್ ಮಾಡಿ. ಪಡ್ಡು ತವೆಯನ್ನು ಬಿಸಿ ಮಾಡಿ ಎಣ್ಣೆ ಸವರಿ. ನಂತರ ಮಿಶ್ರಣವನ್ನು ಪಡ್ಡು ಹಾಕುವ ಗುಂಡಿಗಳಲ್ಲಿ ಹಾಕಿ ಮುಚ್ಚಳ ಮುಚ್ಚಿ. ಎರಡೂ ಬದಿಯೂ ಬಣ್ಣ ಬರುವವರೆಗೆ ಹಾಗೂ ಗರಿಗರಿಯಾಗಿ ಆಗುವವರೆಗೆ ಬೇಯಿಸಿದರೆ ಗೋಧಿ ಮಸಾಲ ಪಡ್ಡು ರೆಡಿ.