ಅಬ್ಬಬ್ಬಾ! ಎರಡೇ ವಾರ, ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 57.5 ಕೋಟಿ ಗಳಿಸಿದ ‘ಸು ಫ್ರಮ್ ಸೋ’! ಇದೇ ನೋಡಿ ಸುಲೋಚನಾಳ ಕಮಾಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ ಬಿ. ಶೆಟ್ಟಿ ನಿರ್ಮಾಣದಲ್ಲಿ, ಜೆಪಿ ತುಮಿನಾಡ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆಯಾಗಿ ಈಗ ಎರಡು ವಾರಗಳು ಕಳೆದಿವೆ. ಜುಲೈ 25ರಂದು ತೆರೆಕಂಡ ಈ ಚಿತ್ರ ಆರಂಭದಲ್ಲಿ ಸಾಧಾರಣ ಓಪನಿಂಗ್ ಪಡೆದಿದ್ದರೂ, ಬಾಯಿ ಮಾತಿನ ಪಬ್ಲಿಸಿಟಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಪಡೆದ ಸ್ಪಂದನೆಯಿಂದ ನಂತರದ ದಿನಗಳಲ್ಲಿ ಭರ್ಜರಿ ಪ್ರದರ್ಶನ ನಡೆಯುತ್ತಿದೆ.

ಈ ಚಿತ್ರ ದಿನ ಕಳೆದಂತೆ ಯಶಸ್ಸಿನ ಮೆಟ್ಟಿಲು ಏರುತ್ತಿದ್ದು, ಈಗಾಗಲೇ ಮಲಯಾಳಂ ಭಾಷೆಯಲ್ಲಿ ಬಿಡುಗಡೆಗೊಂಡಿದೆ. ಆಗಸ್ಟ್ 8ರಿಂದ ತೆಲುಗಿಗೂ ವಿಸ್ತರಣೆಗೊಂಡಿರುವ ಈ ಸಿನಿಮಾ, ಮುಂದಿನ ದಿನಗಳಲ್ಲಿ ಸಂಪೂರ್ಣ ಗಳಿಕೆಯನ್ನು ಹೆಚ್ಚಿಸಬಹುದಾದ ನಿರೀಕ್ಷೆಯನ್ನು ಮೂಡಿಸಿದೆ.

ಇನ್ನು ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ ವರದಿಯ ಪ್ರಕಾರ ‘ಸು ಫ್ರಮ್ ಸೋ’ ಸಿನಿಮಾ ಎರಡು ವಾರಗಳಲ್ಲಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 57.5 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರ ಮೊದಲ 10 ದಿನಗಳ ಕಾಲ ಪ್ರತಿ ದಿನ ಸರಾಸರಿ 3 ಕೋಟಿ ರೂಪಾಯಿಗೂ ಅಧಿಕ ಸಂಗ್ರಹಿಸಿದೆ. ಆಗಸ್ಟ್ 3ರಂದು ಬಂದಿದ್ದ ಭಾನುವಾರದ ಕಲೆಕ್ಷನ್ ಮಾತ್ರವೇ 6.15 ಕೋಟಿ ರೂಪಾಯಿಯಾಗಿದ್ದು, ಈ ಚಿತ್ರಕ್ಕೆ ಸಿಕ್ಕಿರುವ ಒಂದು ದಿನದ ಗರಿಷ್ಠ ಗಳಿಕೆ ಎಂಬ ದಾಖಲೆಯಾಗಿದೆ.

ಚಿತ್ರದ ಕನ್ನಡ ವೇರಿಯಂಟ್ ನಿಂದ 45.78 ಕೋಟಿ ರೂಪಾಯಿ ಬಂದಿದ್ದು, ಮಲಯಾಳಂನಿಂದ ಸುಮಾರು 2 ಕೋಟಿ ರೂಪಾಯಿಯ ಕಲೆಕ್ಷನ್ ನಡೆದಿದೆ. ವಿದೇಶಗಳಿಂದಲೂ ಈ ಚಿತ್ರ ದೊಡ್ಡ ಮಟ್ಟದಲ್ಲಿ ಆದಾಯ ಗಳಿಸಿರುವುದಾಗಿ ವರದಿಯಾಗಿದೆ.

ಚಿತ್ರದ ತಂಡ ಈ ಯಶಸ್ಸಿಗೆ ಕಾರಣರಾದ ಪ್ರೇಕ್ಷಕರು, ಥಿಯೇಟರ್ ಮಾಲೀಕರು ಹಾಗೂ ಡಿಸ್ಟ್ರಿಬ್ಯೂಟರ್‌ಗಳಿಗೆ ಧನ್ಯವಾದ ತಿಳಿಸಿದ್ದು, ರಾಜ್ ಬಿ. ಶೆಟ್ಟಿ ಅವರು ಸದ್ಯ ವಿದೇಶದ ಪ್ರವಾಸದಲ್ಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!