ಏಷ್ಯಾಕಪ್ 2025: ನಡೆಯುತ್ತಾ ಭಾರತ-ಪಾಕಿಸ್ತಾನ ಪಂದ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

2025 ರ ಏಷ್ಯಾಕಪ್ ಟೂರ್ನಮೆಂಟ್ ಇದೇ ಸೆಪ್ಟೆಂಬರ್ 9ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆರಂಭವಾಗಲಿದೆ. ಬಿಸಿಸಿಐ ಆತಿಥ್ಯದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಟೀಂ ಇಂಡಿಯಾ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದ್ದು, ಸೆಪ್ಟೆಂಬರ್ 14 ರಂದು ಪಾಕಿಸ್ತಾನವನ್ನು ಎದುರಿಸುವ ನಿರೀಕ್ಷೆ ಇದೆ. ಈ ಪಂದ್ಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆದರೆ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಆಡುತ್ತದೆಯೇ ಎಂಬುದರ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಇತ್ತೀಚೆಗೆ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಗೊಂದಲ ಉಂಟಾಗಿದೆ. ಹಲವಾರು ಅಭಿಮಾನಿಗಳು ಸಹ ಟೀಂ ಇಂಡಿಯಾ ಪಾಕ್ ವಿರುದ್ಧ ಆಡಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಸಿಇಒ ಸುಭಾನ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದು, “ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ನಡೆಯುವುದು ನಿರೀಕ್ಷೆಯಲ್ಲಿದೆ. ಆದರೆ ನಾವು ಶೇ.100 ರಷ್ಟು ಗ್ಯಾರಂಟಿ ನೀಡಲಾಗದು. ಏಷ್ಯಾಕಪ್‌ ಅಂದ್ರೆ ಅಧಿಕೃತ ಸ್ಪರ್ಧೆ, ಇದು ಖಾಸಗಿ ಟೂರ್ನಿ ಅಲ್ಲ. ಹಾಗಾಗಿ ಸರ್ಕಾರದ ಅನುಮತಿ ಪಡೆಯುವುದು ಅವಶ್ಯ” ಎಂದು ತಿಳಿಸಿದ್ದಾರೆ.

ಈ ಬಾರಿ ಟೂರ್ನಿ ಟಿ20 ಸ್ವರೂಪದಲ್ಲಿದೆ. ಇದು 2026ರ ಟಿ20 ವಿಶ್ವಕಪ್‌ಗೆ ತಯಾರಿ ಎಂಬ ಉದ್ದೇಶವನ್ನೂ ಹೊಂದಿದೆ. ಭಾರತ, ಪಾಕಿಸ್ತಾನ, ಯುಎಇ ಮತ್ತು ಒಮಾನ್ ತಂಡಗಳು ಗ್ರೂಪ್ ಎಯಲ್ಲಿ ಇದ್ದರೆ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಹಾಂಗ್ ಕಾಂಗ್ ತಂಡಗಳು ಗ್ರೂಪ್ ಬಿಯಲ್ಲಿವೆ. ಈ ಎರಡೂ ತಂಡಗಳು ಸೂಪರ್ ಫೋರ್ಸ್ ಹಾಗೂ ಫೈನಲ್ ತಲುಪಿದರೆ, ಭಾರತ-ಪಾಕಿಸ್ತಾನ ತಂಡಗಳು ಒಟ್ಟು ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ.

ಭದ್ರತಾ ಪರಿಸ್ಥಿತಿ, ರಾಜಕೀಯ ಒತ್ತಡ ಮತ್ತು ಸರ್ಕಾರಗಳ ನಿರ್ಧಾರಗಳು ಈ ಹೈವೋಲ್ಟೇಜ್ ಪಂದ್ಯ ನಡೆಯುವುದೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!