ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿ ಆಸಿಫ್ನನ್ನು ದೆಹಲಿಯಲ್ಲಿ ಕೊಲೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಿಜಾಮುದ್ದೀನ್ ಪ್ರದೇಶದಲ್ಲಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆದಿತ್ತು. ಮಾಹಿತಿಯ ಪ್ರಕಾರ, ಸ್ಕೂಟಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ವಿಷಯ ವಿಕೋಪಕ್ಕೆ ಹೋಗಿ ಆಸಿಫ್ ಖುರೇಷಿ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಘಟನೆ ನಿಜಾಮುದ್ದೀನ್ ಭೋಗಲ್ ಜಂಗ್ಪುರದಲ್ಲಿ ನಡೆದಿದೆ.
ಆಸಿಫ್ ಖುರೇಷಿಯವರ ಹತ್ಯೆಯಿಂದಾಗಿ ಖುರೇಷಿ ಕುಟುಂಬದಲ್ಲಿ ದುಃಖದ ವಾತಾವರಣವಿದೆ. ಹುಮಾ ಖುರೇಷಿಯ ತಂದೆ ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಮಾಹಿತಿಯ ಪ್ರಕಾರ, ರಾತ್ರಿ 11 ಗಂಟೆ ಸುಮಾರಿಗೆ, ಸ್ಕೂಟಿಯನ್ನು ಗೇಟ್ನಿಂದ ತೆಗೆದು ಪಕ್ಕದಲ್ಲಿ ನಿಲ್ಲಿಸುವ ವಿಚಾರದಲ್ಲಿ ನಡೆದ ಜಗಳದಲ್ಲಿ ಆರೋಪಿಗಳು ಆಸಿಫ್ ಖುರೇಷಿ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಇದಾದ ನಂತರ, ಆಸಿಫ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಗೆ ತಲುಪಿದಾಗ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇಷ್ಟು ಸಣ್ಣ ವಿಚಾರಕ್ಕೆ ಒಂದು ಜೀವವನ್ನೇ ತೆಗೆಯುತ್ತಾರೆ ಎಂದರೆ ಅವರು ಎಷ್ಟು ಕ್ರೂರಿಗಳಾಗಿರಬಹುದು ಎಂದು ಖುರೇಷಿ ಪತ್ನಿ ಹಾಗೂ ಕುಟುಂಬದವರು ಆರೋಪಿಸಿದ್ದಾರೆ. ಮೃತ ಆಸಿಫ್ ಖುರೇಷಿ ಅವರ ಪತ್ನಿ ಹೇಳುವಂತೆ, ಈ ಹಿಂದೆಯೂ ಆರೋಪಿಯು ಪಾರ್ಕಿಂಗ್ ವಿವಾದಕ್ಕಾಗಿ ನನ್ನ ಪತಿಯೊಂದಿಗೆ ಜಗಳವಾಡಿದ್ದ.
ಗುರುವಾರ ರಾತ್ರಿ ನನ್ನ ಪತಿ ಕೆಲಸದಿಂದ ಮನೆಗೆ ಹಿಂದಿರುಗಿದಾಗ, ಪಕ್ಕದ ಮನೆಯವರ ಸ್ಕೂಟಿ ಮನೆಯ ಮುಂದೆ ನಿಂತಿತ್ತು. ಅದನ್ನು ತೆಗೆಯಲು ಅವರು ಕೇಳಿದ್ದಾರೆ. ಆದರೆ ಸ್ಕೂಟಿ ತೆಗೆಯುವ ಬದಲು ಬಾಯಿಗೆ ಬಂದಂತೆ ಮಾತನಾಡಲು ಶುರು ಮಾಡಿದ್ದರು. ಬಳಿಕ ಜೋರು ಜಗಳ ನಡೆದಿದೆ. ಆರೋಪಿ ಚೂಪಾದ ಚಾಕುವಿನಿಂದ ಅವರಿಗೆ ಇರಿದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆಸಿಫ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಇದರ ನಂತರ ಆತನನ್ನು ಕೊಲ್ಲಲು ಏನು ಬಳಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೊಲೆಯಲ್ಲಿ ಭಾಗಿಯಾಗಿರುವ ಇಬ್ಬರನ್ನು ಬಂಧಿಸಿದ್ದಾರೆ. ಜಗಳ ಕೇವಲ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದ್ದೇ ಅಥವಾ ಅವರ ನಡುವೆ ಹಳೆಯ ದ್ವೇಷವೇ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.