ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಖ್ಯಾತ ನಟ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ತೆರವುಗೊಳಿಸಿದ್ದು, ಇದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ಹೋರಹಾಕಿದ್ದಾರೆ.
ಹೈಕೋರ್ಟ್ ಸೂಚನೆ ಮೇರೆಗೆ ನಗರದ ಕೆಂಗೇರಿ ಬಳಿಯ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಸಮಾಧಿ ತೆರವು ಮಾಡಿರುವುದರಿಂದ ಆಘಾತಕ್ಕೆ ಒಳಗಾಗಿರುವ ವಿಷ್ಣು ಅಭಿಮಾನಿಗಳು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
35 ವರ್ಷಗಳ ಕಲಾಸೇವೆ ಮತ್ತು 200 ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದ ಡಾ.ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನಡೆಸಲಾಗಿತ್ತು. ನಂತರದಲ್ಲಿ ವಿಷ್ಣು ಸಮಾಧಿಯನ್ನು ಸಂರಕ್ಷಿಸಿ, ಅದನ್ನು ಸ್ಮಾರಕವಾಗಿ ಘೋಷಿಸಬೇಕೆಂಬ ಹೋರಾಟ ನಡೆಯುತ್ತಲೇ ಇತ್ತು. ಆದರೆ ಹೈಕೋರ್ಟ್ ಸೂಚನೆ ಮೇರೆ ರಾತ್ರೋರಾತ್ರಿ ಸಮಾಧಿಯನ್ನ ತೆರವುಗೊಳಿಸಲಾಗಿದೆ.
ಮೈಸೂರಿನಲ್ಲಿದೆ ವಿಷ್ಣು ಸ್ಮಾರಕ
ಮೈಸೂರಿನಲ್ಲಿ ಈಗಾಗಲೇ ಒಟ್ಟು 2.75 ಎಕ್ರೆ ಪ್ರದೇಶದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡಲಾಗಿದೆ. ವಿಷ್ಣುವರ್ಧನ್ ಸಿನಿಮಾದಲ್ಲಿನ ಪ್ರಶಸ್ತಿಗಳೂ ಸ್ಮಾರಕದ ಮ್ಯೂಸಿಯಂನಲ್ಲಿವೆ. ವಿಶೇಷವಾದ ವಿಷ್ಣು ಪುತ್ಥಳಿಯನ್ನೂ ನಿರ್ಮಿಸಲಾಗಿದೆ. ನಟನ ಚಿತ್ರರಂಗ ಪ್ರಯಾಣದ ಗ್ಯಾಲರಿ, ವಿಷ್ಣು ಅವರ ಅಪರೂಪದ 600ಕ್ಕೂ ಹೆಚ್ಚು ಫೋಟೋಗಳು, ಅವರು ಬಳಸುತ್ತಿದ್ದ ವಸ್ತುಗಳು, ಬಟ್ಟೆ ಇಲ್ಲಿ ನೋಡಬಹುದಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವಿಷ್ಣುವರ್ಧನ್ ಸ್ಮಾರಕಕ್ಕೆ 2020ರ ಸೆ.15 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ವಿಷ್ಣು ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಮಾಡಲಾಗಿದೆ.
ಈ ಬಗ್ಗೆ ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ, ಪುಸ್ತಕೋದ್ಯಮಿ ವೀರಕಪುತ್ರ ಶ್ರೀನಿವಾಸ್ ಅವರು ಪ್ರತಿಕ್ರಿಯಿಸಿ, ಕೊನೆಗೂ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ನೆಲಸಮ ಮಾಡಿಬಿಟ್ಟರು!. ಹನ್ನೊಂದು ವರ್ಷಗಳ ಹೋರಾಟ ನೀರಲ್ಲಿ ಹೋಮ ಮಾಡಿದಂತಾಯಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.