ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಮತದಾನ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದರು. ಆ ದೂರಿಗೆ ಪ್ರತಿಕ್ರಿಯಿಸಿರುವ ಚುನಾವಣಾಧಿಕಾರಿ ಡಿ.ಕೆ. ಶಿವಕುಮಾರ್ ಅವರು ಸಲ್ಲಿಸಿದ ದೂರನ್ನು ಬೆಂಬಲಿಸುವ ಯಾವುದೇ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಡಿಕ್ಲರೇಷನ್ಗೆ ಸಹಿ ಮಾಡುವಂತೆಯೂ ಅವರು ಸೂಚಿಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ನಾಯಕರು ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿರುವುದನ್ನು ವಿರೋಧಿಸಿ ಜಾಥಾ ನಡೆಸಿದ್ದರು. ಇದಾದ ನಂತರ ರಾಹುಲ್ ಗಾಂಧಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡದೆ ದೆಹಲಿಗೆ ವಾಪಾಸ್ ತೆರಳಿದ್ದರು. ಅವರ ಬದಲಾಗಿ ಡಿಕೆ ಶಿವಕುಮಾರ್ ಕರ್ನಾಟಕ ಚುನಾವಣಾಧಿಕಾರಿ ಕಚೇರಿಗೆ ತೆರಳಿ ದೂರು ನೀಡಿದ್ದರು. ಆದರೆ, ನಿಯಮಗಳ ಪ್ರಕಾರ ಆ ದೂರನ್ನು ಬೆಂಬಲಿಸುವ ದಾಖಲೆಗಳನ್ನು ಇನ್ನೂ ಸಲ್ಲಿಸಲಾಗಿಲ್ಲ ಎಂದು ಚುನಾವಣಾ ಆಯೋಗದ ಕಚೇರಿ ಪ್ರತಿಕ್ರಿಯಿಸಿದೆ.
ಬೆಂಗಳೂರಿನಲ್ಲಿ ಮತಗಳ್ಳತನ ನಡೆದಿರುವ ಬಗ್ಗೆ ಇಂದು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮತ ಕಳ್ಳತನ ಅಗುತ್ತಿರುವುದನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಅಕ್ರಮ ನಡೆದಿರುವುದನ್ನು ಕಾಂಗ್ರೆಸ್ ಪಕ್ಷದ ರೀಸರ್ಚ್ ತಂಡ ವಿಸ್ತೃತವಾಗಿ ಪರಿಶೀಲನೆ ನಡೆಸಿದ ಬಳಿಕ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಚುನಾವಣೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕಷ್ಟು ಪುರಾವೆಗಳನ್ನು ಅಯೋಗಕ್ಕೆ ಸಲ್ಲಿಸಿದ್ದೇವೆ. ಆದರೆ ಸಮಗ್ರ ವಿವರಣೆಯನ್ನು ಸಲ್ಲಿಸಿಲ್ಲ, ನಮ್ಮ ರೀಸರ್ಚ್ ಇನ್ನೂ ಮುಗಿದಿಲ್ಲ, ಇನ್ನೂ ಮಾಹಿತಿ ಸಂಗ್ರಹಿಸುವುದು ಬಾಕಿಯಿದೆ ಎಂದು ಹೇಳಿದ್ದರು.
ಇದೀಗ ಡಿಕೆ ಶಿವಕುಮಾರ್ ಅವರು ನೀಡಿದ ದೂರಿಗೆ ಮತ್ತು ಮಾಡಿದ ಆರೋಪಕ್ಕೆ ಸೂಕ್ತ ಸಾಕ್ಷಿ ನೀಡುವಂತೆ ಚುನಾವಣಾಧಿಕಾರಿ ಕೋರಿದ್ದಾರೆ. ಹಾಗೇ, ಡಿಕ್ಲರೇಷನ್ ಗೆ ಸಹಿ ಹಾಕುವಂತೆ ಆದೇಶಿಸಿದ್ದಾರೆ.
ಈ ಡಿಕ್ಲರೇಷನ್ ಅಥವಾ ಘೋಷಣಾ ಪತ್ರದಲ್ಲಿ ಕಾನೂನು ಅಂಶಗಳ ಬಗ್ಗೆ ಉಲ್ಲೇಖಿಸಲಾಗಿದೆ. ಚುನಾವಣಾ ಪಟ್ಟಿ ತಿದ್ದುಪಡಿ, ಸಿದ್ದತೆ ಅಥವಾ ಶುದ್ಧೀಕರಣ ಸಂಬಂಧ ನೀಡುವ ತಪ್ಪು ಘೋಷಣೆ ಶಿಕ್ಷಾರ್ಹವಾಗಿದೆ. 1950ರ ಪ್ರಜಾಪ್ರಭುತ್ವ ಪ್ರತಿನಿಧಿ ಕಾಯ್ದೆ ಕಲಂ 31ರಂತೆ ಗರಿಷ್ಠ ಒಂದು ವರ್ಷದವರೆಗೆ ಜೈಲುಶಿಕ್ಷೆ ವಿಧಿಸಬಹುದು. ದಂಡ ಅಥವಾ ಎರಡೂ ವಿಧಿಸಬಹುದು ಎಂದು ಅರಿತಿದ್ದೇನೆ ಎಂದು ಘೋಷಣಾ ಪತ್ರಕ್ಕೆ ಸಹಿ ಹಾಕಬೇಕು.