ಮಕ್ಕಳಿಗೆ ರುಚಿಕರವಾಗಿಯೂ, ಪೋಷಕಾಂಶಗಳಿಂದ ಸಮೃದ್ಧವಾಗಿಯೂ ಇರುವ ತಿಂಡಿಯನ್ನು ತಯಾರಿಸಲು ರಾಗಿ–ಬಾಳೆಹಣ್ಣು ದೋಸೆ ಉತ್ತಮ ಆಯ್ಕೆ. ಕ್ಯಾಲ್ಸಿಯಂ, ಕಬ್ಬಿಣ ಹಾಗೂ ನಾರಿನಂಶ ಹೇರಳವಾಗಿರುವ ರಾಗಿ, ಬೆಳವಣಿಗೆಯಲ್ಲಿರುವ ಮಕ್ಕಳಿಗೆ ಶಕ್ತಿದಾಯಕ ಆಹಾರ. ಬಾಳೆಹಣ್ಣು ಸೇರಿಸುವುದರಿಂದ ದೋಸೆಗೆ ಸ್ವಾಭಾವಿಕ ಸಿಹಿ ಹಾಗೂ ಮೃದುವಾದ ತಳಿರು ಸಿಗುತ್ತದೆ. ಕೇವಲ 20 ನಿಮಿಷಗಳಲ್ಲಿ ತಯಾರಿಸಬಹುದಾದ ಈ ದೋಸೆಯ ಮಾಡುವ ವಿಧಾನ ಹೀಗಿದೆ.
ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು – ಅರ್ಧ ಕಪ್
ಬಾಳೆಹಣ್ಣು – 1
ಸಕ್ಕರೆ – 3 ಟೀಸ್ಪೂನ್
ತೆಂಗಿನ ತುರಿ – ಕಾಲು ಕಪ್
ನೀರು – ಅರ್ಧ ಕಪ್
ಹೆಚ್ಚಿದ ಗೋಡಂಬಿ – 2 ಟೀಸ್ಪೂನ್
ಮಾಡುವ ವಿಧಾನ
ಮೊದಲಿಗೆ ಒಂದು ಬಟ್ಟಲಿನಲ್ಲಿ ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ. ಅದಕ್ಕೆ ರಾಗಿ ಹಿಟ್ಟು, ಸ್ವಲ್ಪ ಸಕ್ಕರೆ, ತೆಂಗಿನ ತುರಿ, ಹೆಚ್ಚಿದ ಗೋಡಂಬಿ ಹಾಗೂ ಅಗತ್ಯ ಪ್ರಮಾಣದ ನೀರನ್ನು ಸೇರಿಸಿ ಮಿಶ್ರಣ ಮಾಡಿ. ಹಿಟ್ಟಿಗೆ 10 ನಿಮಿಷಗಳ ಕಾಲ ವಿಶ್ರಾಂತಿ ನೀಡಿ.
ಈಗ ಬಿಸಿ ತವಾಗೆ ಒಂದು ಸೌಟಿನಷ್ಟು ಹಿಟ್ಟನ್ನು ಸುರಿಸಿ ದಪ್ಪದ ದೋಸೆಯಂತೆ ಹರಡಿ. ಒಂದು ಬದಿ ಬೆಂದ ಬಳಿಕ ತಿರುವಿ, ಇನ್ನೊಂದು ಬದಿಯೂ ಚೆನ್ನಾಗಿ ಬೇಯಿಸಿದರೆ ರಾಗಿ ಬಾಳೆಹಣ್ಣು ದೋಸೆ ಸವಿಯಲು ಸಿದ್ಧ.