ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆ.ಪಿ. ತುಮಿನಾಡು ನಿರ್ದೇಶನ ಮತ್ತು ಅಭಿನಯದ ‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆಗೊಂಡು 16 ದಿನ ಕಳೆದರೂ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಮುಂದುವರಿದಿದೆ. ಕರ್ನಾಟಕದಲ್ಲಿ ಮಾತ್ರವೇ ಈ ಚಿತ್ರ ಈಗಾಗಲೇ 50 ಕೋಟಿ ರೂ. ಗಡಿ ದಾಟಿದ್ದು, ಆಗಸ್ಟ್ 9ರ ಶನಿವಾರ ಒಂದೇ ದಿನದಲ್ಲಿ 5.08 ಕೋಟಿ ರೂ. ಗಳಿಸಿದೆ.
ವರದಿಗಳ ಪ್ರಕಾರ 16ನೇ ದಿನದಲ್ಲೇ ಇಷ್ಟು ದೊಡ್ಡ ಕಲೆಕ್ಷನ್ ಸಾಧಿಸಿರುವುದು ಹೊಸ ಬಿಡುಗಡೆಯ ಚಿತ್ರಗಳಿಗೂ ಪೈಪೋಟಿ ನೀಡುವಂತಾಗಿದೆ. ಕರ್ನಾಟಕದಲ್ಲಿ ಒಟ್ಟಾರೆ ಕಲೆಕ್ಷನ್ 53.53 ಕೋಟಿ ರೂ. ತಲುಪಿದ್ದು, ಮಲಯಾಳಂ, ತೆಲುಗು ಹಾಗೂ ವಿದೇಶಿ ಮಾರುಕಟ್ಟೆಯ ಲಾಭ ಸೇರಿ 64.5 ಕೋಟಿ ರೂ. ಆಗಿದೆ.
ಈ ವೇಗ ಮುಂದುವರಿದರೆ ಶೀಘ್ರದಲ್ಲೇ ‘ಸು ಫ್ರಮ್ ಸೋ’ 100 ಕೋಟಿ ರೂ. ಕ್ಲಬ್‌ಗೆ ಸೇರುವ ಸಾಧ್ಯತೆ ಇದೆ. ತೆಲುಗಿನಲ್ಲಿ ಆಗಸ್ಟ್ 8ರಂದು ಬಿಡುಗಡೆಯಾದ ಈ ಚಿತ್ರ, ಉತ್ತಮ ಓಪನಿಂಗ್ ಪಡೆದು ಪಾಸಿಟಿವ್ ಪ್ರತಿಕ್ರಿಯೆ ಗಳಿಸಿದೆ. ಕೇರಳದಲ್ಲೂ ಅನೇಕ ಶೋಗಳು ಹೌಸ್‌ಫುಲ್ ಆಗಿ ಪ್ರದರ್ಶನ ಕಾಣುತ್ತಿವೆ.
ಸಂದ್ಯಾ ಅರಕೆರೆ, ರಾಜ್ ಬಿ. ಶೆಟ್ಟಿ, ಶನೀಲ್ ಗೌತಮ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಣಾಜೆ, ಮೈಮ್ ರಾಮದಾಸ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ. ಬಾಯಿ ಮಾತಿನ ಪ್ರಚಾರದಿಂದ ಚಿತ್ರದ ಯಶಸ್ಸು ಇನ್ನಷ್ಟು ಹೆಚ್ಚಾಗಿದೆ.
ಭಾನುವಾರ (ಆಗಸ್ಟ್ 10) ಬೆಂಗಳೂರಿನಲ್ಲಿ ಮಾತ್ರವೇ 200ಕ್ಕೂ ಹೆಚ್ಚು ಹೌಸ್‌ಫುಲ್ ಶೋಗಳು ನಡೆದಿವೆ. 3ನೇ ವೀಕೆಂಡ್‌ನಲ್ಲಿಯೂ ಇಂತಹ ಪ್ರತಿಕ್ರಿಯೆ ಸಿಗುವುದು ಅಪರೂಪ. ಆಗಸ್ಟ್ 14ರಂದು ಬಿಡುಗಡೆಯಾಗಲಿರುವ ರಜನಿಕಾಂತ್ ನಟನೆಯ ‘ಕೂಲಿ’ ಹಾಗೂ ಜೂನಿಯರ್ ಎನ್‌ಟಿಆರ್–ಹೃತಿಕ್ ರೋಷನ್ ಅಭಿನಯದ ‘ವಾರ್ 2’ ನಂತರವೂ ‘ಸು ಫ್ರಮ್ ಸೋ’ಗೆ ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲಕಾರಿ.