ಇಂದು ಬೆಂಗಳೂರಿಗೆ ಪ್ರಧಾನಿ: ಕೊನೆಗೂ ಸಿಕ್ತು ಆರ್. ಅಶೋಕ್ ಗೆ ಆಹ್ವಾನ! ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿರುವವರು ಇವರೇ ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಳಗ್ಗೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೇಖ್ರಿ ವೃತ್ತದ ಮಿಲಿಟರಿ ಬೇಸ್‌ಗೆ ಬಂದು, ರಸ್ತೆ ಮಾರ್ಗವಾಗಿ ಬೆಳಗ್ಗೆ 11ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣ ತಲುಪುವರು. ಇಲ್ಲಿ ಮೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸುವರು.

ನಂತರ ಹಳದಿ ಮಾರ್ಗದ ಮೆಟ್ರೋ ಉದ್ಘಾಟನೆ ಹಾಗೂ ಮೆಟ್ರೋ 3ನೇ ಹಂತದ ಶಂಕುಸ್ಥಾಪನೆ ನೆರವೇರಿಸಲಿದ್ದು, ಮಧ್ಯಾಹ್ನ 1 ಗಂಟೆಗೆ ಎಲೆಕ್ಟ್ರಾನಿಕ್‌ ಸಿಟಿಯ ಐಐಐಟಿ ಕೇಂದ್ರದ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ 1.30ಕ್ಕೆ ನಡೆಯುವ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡುವರು. ಈ ಸಂದರ್ಭದಲ್ಲಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲು 13 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಮೋದಿಯೊಂದಿಗೆ ವೇದಿಕೆಯಲ್ಲಿ ರಾಜ್ಯಪಾಲ ತಾವರ್‌ ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರು ಅಶ್ವಿನಿ ವೈಷ್ಣವ್, ಶೋಭಾ ಕರಂದ್ಲಾಜೆ, ಎಚ್‌.ಡಿ. ಕುಮಾರಸ್ವಾಮಿ, ವಿ. ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ, ಸಂಸದ ಡಾ. ಸಿ.ಎನ್. ಮಂಜುನಾಥ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಭಾಗವಹಿಸುವರು.

ಮೊದಲಿಗೆ ಕೇವಲ 10 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದ್ದರೂ, ನಂತರ ಆರ್. ಅಶೋಕ್, ಬೈರತಿ ಸುರೇಶ್ ಮತ್ತು ಡಾ. ಮಂಜುನಾಥ್‌ರನ್ನು ಪಟ್ಟಿ ಸೇರಿಸಿ ಒಟ್ಟು 13 ಮಂದಿಗೆ ಅವಕಾಶ ನೀಡಲಾಗಿದೆ. ಆರ್. ಅಶೋಕ್ ಅವರಿಗೆ ಪ್ರಾರಂಭದಲ್ಲಿ ಆಹ್ವಾನ ನೀಡದಿದ್ದ ಕಾರಣ ಅಸಮಾಧಾನ ವ್ಯಕ್ತವಾಗಿತ್ತು. ನಂತರ ಪಿಎಂ ಕಚೇರಿ ಅವರಿಗೆ ಆಹ್ವಾನ ನೀಡಲಾಗಿದೆ.

ಸರ್ಕಾರಿ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ಈ ಪ್ರವಾಸದಲ್ಲಿ, ಪ್ರಧಾನಿ ಮೋದಿ ನಾಲ್ಕು ಗಂಟೆಗಳ ಅವಧಿಯಲ್ಲಿ ಮೂರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಮಧ್ಯಾಹ್ನ 2 ಗಂಟೆಗೆ ಹೆಲಿಕಾಪ್ಟರ್‌ನಲ್ಲಿ ಎಚ್‌ಎಎಲ್‌ ವಿಮಾನ ನಿಲ್ದಾಣ ತಲುಪಿ, ದೆಹಲಿಗೆ ಹಿಂತಿರುಗುವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!