ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಟೆಸ್ಟ್ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್, ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 164 ಎಸೆತಗಳಲ್ಲಿ 118 ರನ್ ಗಳಿಸಿದರು. 14 ಬೌಂಡರಿಗಳು ಹಾಗೂ 2 ಸಿಕ್ಸರ್‌ಗಳನ್ನು ಒಳಗೊಂಡ ಈ ಶತಕದ ನೆರವಿನಿಂದ ಭಾರತ 396 ರನ್‌ಗಳ ಎರಡನೇ ಇನ್ನಿಂಗ್ಸ್ ಮೊತ್ತದೊಂದಿಗೆ ಇಂಗ್ಲೆಂಡ್‌ಗೆ 374 ರನ್‌ಗಳ ಗುರಿ ನೀಡಿತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 367 ರನ್‌ಗಳಿಗೆ ಆಲೌಟ್ ಆಗಿ, ಭಾರತ 6 ರನ್‌ಗಳಿಂದ ರೋಚಕ ಜಯ ಸಾಧಿಸಿತು.
ಈ ಸರಣಿಯಲ್ಲಿ ಜೈಸ್ವಾಲ್ ಒಟ್ಟು 411 ರನ್‌ಗಳನ್ನು ಗಳಿಸಿದ್ದು, 2 ಶತಕ ಹಾಗೂ 2 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಅರ್ಧಶತಕಗಳೊಂದಿಗೆ 41.10ರ ಸರಾಸರಿಯನ್ನು ದಾಖಲಿಸಿಕೊಂಡ ಅವರು ಸರಣಿಯ ಅತ್ಯಂತ ಪ್ರಭಾವಿ ಆಟಗಾರರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್, ಜೈಸ್ವಾಲ್‌ರ ಆಟದ ಶೈಲಿಯನ್ನು ಭಾರತದ ದಿಗ್ಗಜ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್‌ರೊಂದಿಗೆ ಹೋಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಕಠಿಣ ಪರಿಸ್ಥಿತಿಯಲ್ಲಿಯೂ ಅವರು ಆಡಿದ ಬ್ಯಾಟಿಂಗ್ ಅದ್ಭುತ. ಅವರ ಆಕ್ರಮಣಕಾರಿ ಶೈಲಿ ನನಗೆ ಸೆಹ್ವಾಗ್‌ರನ್ನು ನೆನಪಿಸಿತು. ಮುಂಬರುವ ದಿನಗಳಲ್ಲಿ ಅವರು ಕ್ರಿಕೆಟ್‌ನ ಸೂಪರ್‌ಸ್ಟಾರ್ ಆಗುವ ಸಾಮರ್ಥ್ಯ ಹೊಂದಿದ್ದಾರೆ” ಎಂದು ಕ್ಲಾರ್ಕ್ ಶ್ಲಾಘಿಸಿದ್ದಾರೆ.
ಜೈಸ್ವಾಲ್‌ರ ಟೆಸ್ಟ್ ವೃತ್ತಿ ಸಾಧನೆ ಕೂಡ ಗಮನಾರ್ಹವಾಗಿದೆ – 24 ಪಂದ್ಯಗಳಲ್ಲಿ 2209 ರನ್‌ಗಳೊಂದಿಗೆ 5 ಶತಕ, 9 ಅರ್ಧಶತಕ, 270 ಬೌಂಡರಿಗಳು ಮತ್ತು 43 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಗರಿಷ್ಠ ಸ್ಕೋರ್ 214* ಅವರ ಹೆಸರಿನಲ್ಲಿದೆ.
ಸೆಹ್ವಾಗ್‌ರಂತೆಯೇ ವೇಗವಾದ ಆರಂಭವನ್ನು ಒದಗಿಸುವ ಜೈಸ್ವಾಲ್, ಭವಿಷ್ಯದಲ್ಲಿ ಭಾರತ ಕ್ರಿಕೆಟ್‌ಗೆ ಮತ್ತೊಂದು ದಿಗ್ಗಜ ಆರಂಭಿಕನಾಗಿ ರೂಪುಗೊಳ್ಳುವ ನಿರೀಕ್ಷೆ ಹೆಚ್ಚಾಗಿದೆ.