ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಕುಲ್ಗಾಮ್ ಜಿಲ್ಲೆಯ ಅಖಾಲ್ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ಭಾನುವಾರ 10ನೇ ದಿನಕ್ಕೂ ಕಾಲಿಟ್ಟಿದೆ. ಶನಿವಾರ ರಾತ್ರಿ ಮತ್ತು ಭಾನುವಾರ ಮುಂಜಾನೆಗೂ ಗುಂಡಿನ ಚಕಮಕಿ ಮುಂದುವರಿದಿದ್ದು, ಇದನ್ನು ಕಣಿವೆಯ ಇತ್ತೀಚಿನ ಅವಧಿಯಲ್ಲಿ ನಡೆದ ದೀರ್ಘಾವಧಿಯ ಕಾರ್ಯಾಚರಣೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.
ಇದೇ ವೇಳೆ, ಕಿಶ್ತ್ವಾರ್ ಜಿಲ್ಲೆಯ ಡೂಲ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಇಂದು ಬೆಳಿಗ್ಗೆ ಹೊಸ ಎನ್‌ಕೌಂಟರ್ ಆರಂಭವಾಗಿದೆ. ಭಯೋತ್ಪಾದಕರು ಅಡಗಿರುವುದಾಗಿ ಪಡೆದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯಾಚರಣೆ ನಡೆಸುವ ವೇಳೆ, ಇಬ್ಬರು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಸೇನೆಯ ವೈಟ್ ನೈಟ್ ಕಾರ್ಪ್ಸ್ ಇದನ್ನು ದೃಢಪಡಿಸಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದೆ.
ಇದಕ್ಕೂ ಮುನ್ನ, ಕಿಶ್ತ್ವಾರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಯೋತ್ಪಾದಕರ ನೆಲೆಗಳು ಮತ್ತು ಅವರ ಸಹಚರರ ಮನೆಗಳ ಮೇಲೆ ಭಾರಿ ಶೋಧ ನಡೆಸಲಾಗಿತ್ತು. ಹಿಜ್ಬುಲ್ ಮುಜಾಹಿದ್ದೀನ್‌ನ ಪ್ರಮುಖ ಉಗ್ರ ಮೊಹಮ್ಮದ್ ಅಮೀನ್ ಭಟ್ ಅಲಿಯಾಸ್ “ಜೆಹಾಂಗೀರ್ ಸರೂರಿ” ಸೇರಿ 26 ಮನೆಗಳನ್ನು ಗುರಿಯಾಗಿಸಿ ಶೋಧ ಕೈಗೊಳ್ಳಲಾಗಿದೆ.
ಭಯೋತ್ಪಾದಕರಿಗೆ ಸ್ಥಳೀಯ ಬೆಂಬಲ ಜಾಲವನ್ನು ಅಸ್ತವ್ಯಸ್ತಗೊಳಿಸುವುದು, ಗಡಿಯಾಚೆಗಿನ ಲಾಜಿಸ್ಟಿಕಲ್ ಸಹಾಯ ಮಾರ್ಗಗಳನ್ನು ಕಡಿತಗೊಳಿಸುವುದು ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ತಡೆಯೊಡ್ಡುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೋಧದ ವೇಳೆ ಎಲೆಕ್ಟ್ರಾನಿಕ್ ಸಾಧನಗಳು, ದಾಖಲೆಗಳು ಹಾಗೂ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಮುಖ ಪುರಾವೆಗಳು ವಶಪಡಿಸಿಕೊಳ್ಳಲಾಗಿದೆ.
ಕುಲ್ಗಾಮ್ ಎನ್‌ಕೌಂಟರ್‌ನಲ್ಲಿ ಇದುವರೆಗೆ ಇಬ್ಬರು ಯೋಧರು ಹುತಾತ್ಮರಾಗಿದ್ದು, ಆರು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಪಡೆಗಳು ಪ್ರದೇಶವನ್ನು ಸಂಪೂರ್ಣವಾಗಿ ವಶದಲ್ಲಿಟ್ಟುಕೊಂಡು ಶೋಧ ಮುಂದುವರಿಸುತ್ತಿವೆ.