ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ರಾಜ್ಯ ಪಾನೀಯ ನಿಗಮ (BEVCO) ಆನ್‌ಲೈನ್ ಮೂಲಕ ಮದ್ಯ ಮಾರಾಟಕ್ಕೆ ಸರ್ಕಾರದ ಅನುಮತಿ ಪಡೆಯಲು ಮುಂದಾಗಿದೆ. ಬೆವ್ಕೊ ವ್ಯವಸ್ಥಾಪಕ ನಿರ್ದೇಶಕಿ ಹರ್ಷಿತಾ ಅಟ್ಟಲೂರಿ ಅವರು ಈ ಕುರಿತು ವಿವರವಾದ ಶಿಫಾರಸು ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದಾಯ ಹೆಚ್ಚಿಸುವ ಗುರಿ ಹೊಂದಿರುವ ಈ ಯೋಜನೆಯಲ್ಲಿ, ನಿರ್ದಿಷ್ಟ ಷರತ್ತುಗಳೊಂದಿಗೆ ಮದ್ಯವನ್ನು ಮೊಬೈಲ್ ಅಪ್ಲಿಕೇಶನ್ ಮುಖಾಂತರ ಮಾರಾಟ ಮಾಡುವ ಪ್ರಸ್ತಾಪವಿದೆ.
ಸ್ವಿಗ್ಗಿ ಸೇರಿದಂತೆ ಅನೇಕ ಆನ್‌ಲೈನ್ ವಿತರಣಾ ವೇದಿಕೆಗಳು ಈ ಯೋಜನೆಯಲ್ಲಿ ಆಸಕ್ತಿ ತೋರಿಸಿದ್ದು, ಬೆವ್ಕೊ ಈಗಾಗಲೇ ತನ್ನದೇ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ಮೂರು ವರ್ಷಗಳ ಹಿಂದೆ ಇಂತಹ ಪ್ರಸ್ತಾಪ ಬಂದಿದ್ದರೂ ಸರ್ಕಾರದಿಂದ ಅನುಮತಿ ದೊರಕಿರಲಿಲ್ಲ.
ಮದ್ಯ ಖರೀದಿಗೆ ಷರತ್ತುಗಳು
ಆನ್‌ಲೈನ್‌ನಲ್ಲಿ ಮದ್ಯ ಖರೀದಿಸಲು 23 ವರ್ಷಕ್ಕಿಂತ ಮೇಲ್ಪಟ್ಟವರೇ ಅರ್ಹರು. ಖರೀದಿಸುವ ಮೊದಲು ವಯಸ್ಸಿನ ಪುರಾವೆಯನ್ನು ಕಡ್ಡಾಯವಾಗಿ ಒದಗಿಸಬೇಕು. ಜೊತೆಗೆ ಕಡಿಮೆ ಪವರ್ ಹೊಂದಿರುವ ಮದ್ಯದ ಉತ್ಪನ್ನಗಳನ್ನು ಬಿಡುಗಡೆ ಮಾಡುವುದರ ಮೂಲಕ ಪ್ರವಾಸಿಗರು ಸೇರಿದಂತೆ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಉದ್ದೇಶವಿದೆ.
ವಿದೇಶಿ ಬಿಯರ್ ಮಾರಾಟಕ್ಕೂ ಅವಕಾಶ
ಹೊಸ ನೀತಿಯಡಿ ವಿದೇಶಿ ನಿರ್ಮಿತ ಬಿಯರ್ ಮಾರಾಟಕ್ಕೂ ಅವಕಾಶ ಕಲ್ಪಿಸುವಂತೆ ಬೆವ್ಕೊ ಮನವಿ ಮಾಡಿದೆ. ಅಧಿಕಾರಿಗಳ ಪ್ರಕಾರ, ಈ ಕ್ರಮದಿಂದ ರಾಜ್ಯದ ಮದ್ಯ ಮಾರಾಟದ ಆದಾಯದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ.
ಬೆವ್ಕೊ ಪ್ರಸ್ತಾಪಿಸಿರುವ ಆನ್‌ಲೈನ್ ಮದ್ಯ ಮಾರಾಟ ಯೋಜನೆ, ಡಿಜಿಟಲ್ ವಿತರಣಾ ವ್ಯವಸ್ಥೆಗೆ ಮತ್ತೊಂದು ಹೆಜ್ಜೆಯಾಗಿದ್ದು, ಗ್ರಾಹಕರಿಗೆ ಸುಲಭ ಪ್ರವೇಶ ಒದಗಿಸುವುದರೊಂದಿಗೆ ರಾಜ್ಯದ ಆದಾಯವನ್ನೂ ಹೆಚ್ಚಿಸಲಿದೆ. ಆದರೆ, ಸಾಮಾಜಿಕ ಹೊಣೆಗಾರಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ.