ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಐಎಂಐಎಂ ಮುಖ್ಯಸ್ಥ ಮತ್ತು ಹಿರಿಯ ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ನಡೆಯಬಾರದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಅವರು, ದುಬೈನಲ್ಲಿ ನಡೆಯಲಿರುವ ಏಷ್ಯಾಕಪ್ ಇಂಡಿಯಾ-ಪಾಕ್ ಪಂದ್ಯವನ್ನು ವೀಕ್ಷಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದರು.
ಓವೈಸಿ ಅವರ ಮಾತಿನಲ್ಲಿ, “ನೀರು ಮತ್ತು ರಕ್ತ ಒಟ್ಟಿಗೆ ಹರಿಯುವುದಿಲ್ಲ. ಮಾತುಕತೆ ಮತ್ತು ಭಯೋತ್ಪಾದನೆ ಒಂದೇ ಸಮಯದಲ್ಲಿ ಸಾಗಲಾರವು. ಪ್ರಧಾನಿ ಸ್ವತಃ ಈ ಮಾತನ್ನು ಹಲವು ಬಾರಿ ಹೇಳಿದ್ದಾರೆ. ಹಾಗಿದ್ದರೆ ಭಾರತ ಪಾಕಿಸ್ತಾನದೊಂದಿಗೆ ಹೇಗೆ ಕ್ರಿಕೆಟ್ ಆಡುತ್ತಿದೆ?” ಎಂದು ಪ್ರಶ್ನಿಸಿದರು.
ಇತ್ತೀಚಿನ ಪಹಲ್ಗಾಮ್ ಉಗ್ರ ದಾಳಿಯನ್ನು ಉಲ್ಲೇಖಿಸಿದ ಅವರು, ಉಗ್ರರು ಕುಟುಂಬದ ಮುಂದೆ ನಿರಪರಾಧಿಗಳನ್ನು ಕೊಂದ ಘಟನೆಯು ತಮಗೆ ತುಂಬಾ ನೋವುಂಟು ಮಾಡಿದೆ ಎಂದರು. “ಇಂತಹ ಕ್ರೂರ ದಾಳಿಗಳ ನಂತರ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದು ಸರಿಯಲ್ಲ” ಎಂದು ಒತ್ತಿಹೇಳಿದರು.
ಓವೈಸಿ ಸರ್ಕಾರಕ್ಕೆ ಸಂದೇಶವನ್ನೂ ನೀಡಿದರು “ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯ ನಡೆಯಬೇಕೋ ಬೇಡವೋ ನಿರ್ಧರಿಸುವ ಅಧಿಕಾರ ಸರ್ಕಾರದ ಕೈಯಲ್ಲಿದೆ. ಆದರೆ ನನ್ನ ಅಭಿಪ್ರಾಯದಲ್ಲಿ, ಇಂತಹ ಪಂದ್ಯಗಳನ್ನು ನಿಲ್ಲಿಸಲೇಬೇಕು” ಎಂದರು.
ಓವೈಸಿ ಅವರ ಈ ಹೇಳಿಕೆ ಭಾರತ-ಪಾಕಿಸ್ತಾನ ಕ್ರಿಕೆಟ್ ಕುರಿತ ಚರ್ಚೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಕ್ರೀಡೆ ರಾಜಕೀಯದಿಂದ ಬೇರ್ಪಟ್ಟಿರಬೇಕೆಂಬ ಅಭಿಪ್ರಾಯವೂ ಇದೆ, ಆದರೆ ಉಗ್ರ ದಾಳಿಗಳ ಹಿನ್ನಲೆಯಲ್ಲಿ ಇಂತಹ ಕ್ರೀಡಾ ಸಂಪರ್ಕಗಳ ಬಗ್ಗೆ ಪ್ರಶ್ನೆಗಳು ತಲೆದೋರಿವೆ.