ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರ್ಪಡೆಯಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಹಳದಿ ಮಾರ್ಗ ಮೆಟ್ರೋ ಉದ್ಘಾಟನೆ, ಮೂರನೇ ಹಂತದ ಕಿತ್ತಳೆ ಮಾರ್ಗ ಶಂಕುಸ್ಥಾಪನೆ ಹಾಗೂ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲು ಚಾಲನೆ ನೆರವೇರಿಸಿದರು. ಈ ಸಂದರ್ಭದಲ್ಲಿ ನಡೆದ IIIT ಸಭಾಂಗಣದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಪಾತ್ರ ಮತ್ತು ಕೊಡುಗೆಯನ್ನು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಹಳದಿ ಮಾರ್ಗ ಉದ್ಘಾಟನೆಯನ್ನು ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಯ ಪ್ರಮುಖ ಹಂತವೆಂದು ಹೇಳಿದರು. 19.15 ಕಿಲೋಮೀಟರ್ ಉದ್ದದ ಈ ಮಾರ್ಗವು 7,160 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಪ್ರತಿದಿನ ಸುಮಾರು 3.5 ಲಕ್ಷ ಪ್ರಯಾಣಿಕರಿಗೆ ಸೌಲಭ್ಯ ಒದಗಿಸಲಿದೆ. ಈಗಾಗಲೇ ದಿನಕ್ಕೆ 9 ಲಕ್ಷ ಜನರು ಮೆಟ್ರೋ ಬಳಸಿ ಪ್ರಯಾಣಿಸುತ್ತಿದ್ದು, ಈ ಮಾರ್ಗದಿಂದ ಒಟ್ಟು ಪ್ರಯಾಣಿಕರ ಸಂಖ್ಯೆ 12.5 ಲಕ್ಷಕ್ಕೆ ಏರಲಿದೆ.
ರಾಜ್ಯ ಮತ್ತು ಕೇಂದ್ರದ ಹಣಕಾಸಿನ ಪಾಲು
ಮೆಟ್ರೋ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 50:50 ಅನುಪಾತದ ಆರ್ಥಿಕ ಸಹಭಾಗಿತ್ವದಲ್ಲಿದೆ. ಆದರೆ, ರಾಜ್ಯ ಸರ್ಕಾರ ಈಗಾಗಲೇ 20,387 ಕೋಟಿ ವೆಚ್ಚ ಮಾಡಿರುವುದಾಗಿ ಸಿಎಂ ತಿಳಿಸಿದ್ದಾರೆ. ಕೇಂದ್ರ ಸರ್ಕಾರ 7,463.86 ಕೋಟಿ ವೆಚ್ಚಮಾಡಿದ್ದು, 3,900 ಕೋಟಿ ಸಾಲವನ್ನು ರಾಜ್ಯವು ಬಡ್ಡಿಯೊಂದಿಗೆ ಮರುಪಾವತಿಸಿದೆ.
ಕಿತ್ತಳೆ ಮಾರ್ಗದ ಮೂರನೇ ಹಂತದ ಮೆಟ್ರೋ ಶಂಕುಸ್ಥಾಪನೆಯು 44.65 ಕಿಲೋಮೀಟರ್ ಉದ್ದದ ಎಲಿವೇಟೆಡ್ ಮಾರ್ಗವನ್ನು ಒಳಗೊಂಡಿದೆ. 15,611 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಎರಡು ಪ್ರಮುಖ ಕಾರಿಡಾರ್ಗಳು ಇರುತ್ತವೆ. ಇದರೊಂದಿಗೆ ಬೆಂಗಳೂರಿನ ಒಳನಗರ ಸಂಪರ್ಕವು ಇನ್ನಷ್ಟು ವಿಸ್ತರಿಸಲಿದೆ.
ಕೇಂದ್ರಕ್ಕೆ ಸಿಎಂ ಮನವಿ
ಸಿಎಂ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಗುಜರಾತ್ ಮತ್ತು ಮಹಾರಾಷ್ಟ್ರದಂತೆಯೇ ಆದ್ಯತೆ ನೀಡುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದರು. ನಾಲ್ಕನೇ ಹಂತದ ಮೆಟ್ರೋ ಯೋಜನೆಗೆ ಶೀಘ್ರ ಅನುಮೋದನೆ ನೀಡಬೇಕೆಂದು ಕೋರಿದರು. ರಾಜ್ಯವು ಆರ್ಥಿಕವಾಗಿ ಹೆಚ್ಚಿನ ಕೊಡುಗೆ ನೀಡುತ್ತಿದ್ದರೂ, ಕೇಂದ್ರದಿಂದ ಹೆಚ್ಚಿನ ನಿಧಿ ಅಗತ್ಯವಿದೆ ಎಂದು ಒತ್ತಿಹೇಳಿದರು.