ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್, ಟಿ20 ಅಂತಾರಾಷ್ಟ್ರೀಯ ಮಾದರಿಗಳಿಂದ ನಿವೃತ್ತಿ ಹೊಂದಿದ್ದಾರೆ. ಆದರೆ, ಏಕದಿನ ಮಾದರಿಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಲಿದ್ದಾರೆ.
ಇದರ ನಡುವೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027ರ ಏಕದಿನ ಕ್ರಿಕೆಟ್ ವಿಶ್ವಕಪ್ ವರೆಗೂ ತಂಡದಲ್ಲಿ ಇರುತ್ತಾರಾ ಇಲ್ಲವೇ ಎಂಬ ಬಗ್ಗೆ ಕಳೆದ ಐದಾರು ತಿಂಗಳಿಂದಲೂ ಚರ್ಚೆಗಳು ನಡೆಯುತ್ತಲೇ ಇವೆ. ಶೀಘ್ರದಲ್ಲೇ ಅವರೇ ನಿವೃತ್ತಿ ಘೋಷಿಸುವ ಸಂದರ್ಭ ಎದುರಾದರೂ ಅಚ್ಚರಿಯಿಲ್ಲ ಎಂಬ ಮಾತು ಇದೀಗ ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.
ಬಿಸಿಸಿಐ ಮತ್ತು ಟೀಂ ಮ್ಯಾನೇಜ್‌ಮೆಂಟ್ 2027ರ ವಿಶ್ವಕಪ್‌ಗಾಗಿ ಯುವ ಕ್ರಿಕೆಟಿಗರೊಂದಿಗೆ ಬಲಿಷ್ಠ ತಂಡವನ್ನು ಸಿದ್ಧಪಡಿಸುತ್ತಿದೆ. ಹೀಗಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ವೃತ್ತಿಜೀವನದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ್ದು, 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯೋದು ಅನುಮಾನ ಎನಿಸಿದೆ.
ಇತ್ತ 2027ರ ಏಕದಿನ ವಿಶ್ವಕಪ್‌ನ ದೃಷ್ಟಿಯಿಂದ ಏಕದಿನ ತಂಡದಲ್ಲಿ ಮುಂದುವರಿಯಬೇಕಾದರೆ ಹಿರಿಯ ಆಟಗಾರರು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಕಡ್ಡಾಯವಾಗಿ ಆಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.