ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೂ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಜಿಮ್ನಲ್ಲಿ ತೀವ್ರ ವ್ಯಾಯಾಮ ಮಾಡುವಾಗ ರಕ್ತದೊತ್ತಡ ತೀವ್ರ ಏರಿಕೆಯಾಗುವುದು ಸಾಮಾನ್ಯ. ಆದರೆ ಹೃದಯ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಅಥವಾ ಧಮನಿಗಳಲ್ಲಿ ಅಡ್ಡಿಯಾಗಿದ್ದರೆ ಈ ಏರಿಕೆ ಪ್ರಾಣಾಪಾಯಕಾರಿ ಆಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹೀಗಾಗಿ ಹೃದಯದ ಸ್ಥಿತಿಯನ್ನು ಮುಂಚಿತವಾಗಿ ತಿಳಿದುಕೊಳ್ಳಲು ಹೃದ್ರೋಗ ತಜ್ಞರು ಶಿಫಾರಸು ಮಾಡುವ ಕೆಲವು ಪ್ರಮುಖ ಪರೀಕ್ಷೆಗಳು ಇಲ್ಲಿವೆ.
ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG)
ಹೃದಯದ ವಿದ್ಯುತ್ ಚಟುವಟಿಕೆಯನ್ನು ದಾಖಲಿಸುವ ಈ ಪರೀಕ್ಷೆ ಅನಿಯಮಿತ ಬಡಿತಗಳು, ಹಿಂದಿನ ಹೃದಯಾಘಾತದ ಗುರುತುಗಳು ಹಾಗೂ ಎದೆನೋವಿನ ಕಾರಣಗಳನ್ನು ಪತ್ತೆ ಹಚ್ಚುತ್ತದೆ. ಎದೆ ನೋವು, ತಲೆತಿರುಗುವಿಕೆ, ಉಸಿರಾಟದ ತೊಂದರೆ ಇದ್ದರೆ ವೈದ್ಯರು ECG ಪರೀಕ್ಷೆ ಮಾಡಿಸಲು ಸಲಹೆ ನೀಡುತ್ತಾರೆ.
2D ಎಕೋ ಪರೀಕ್ಷೆ
ಅಲ್ಟ್ರಾಸೌಂಡ್ ಮೂಲಕ ಹೃದಯದ ಆಕೃತಿ ಮತ್ತು ಕಾರ್ಯವನ್ನು ವೀಕ್ಷಿಸುವ ಈ ಪರೀಕ್ಷೆ, ಕವಾಟಗಳ ಸ್ಥಿತಿ, ರಕ್ತದ ಹರಿವು ಹಾಗೂ ಯಾವುದೇ ರಚನಾತ್ಮಕ ಅಸಹಜತೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಶಸ್ತ್ರಚಿಕಿತ್ಸೆಗೆ ಮುನ್ನ ಅಥವಾ ನಂತರವೂ ಇದನ್ನು ಮಾಡಿಸಲಾಗುತ್ತದೆ.
ಟ್ರೆಡ್ಮಿಲ್ ಟೆಸ್ಟ್ (TMT)
ವ್ಯಾಯಾಮದ ವೇಳೆ ಹೃದಯ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅಳೆಯುವ ಪರೀಕ್ಷೆ. ಟ್ರೆಡ್ಮಿಲ್ನಲ್ಲಿ ನಡೆಯುತ್ತಾ ಹೃದಯದ ವಿದ್ಯುತ್ ಚಟುವಟಿಕೆ, ರಕ್ತದೊತ್ತಡ ಮತ್ತು ನಾಡಿ ಮಿಡಿತವನ್ನು ಪರಿಶೀಲಿಸಲಾಗುತ್ತದೆ.
ಟ್ರೋಪೋನಿನ್ ಪರೀಕ್ಷೆ
ಹೃದಯ ಸ್ನಾಯು ಹಾನಿಯನ್ನು ಪತ್ತೆ ಮಾಡಲು ಬಳಸುವ ರಕ್ತ ಪರೀಕ್ಷೆ. ಹೃದಯಾಘಾತ ಶಂಕಿತ ಸಂದರ್ಭಗಳಲ್ಲಿ ಇದು ಅತ್ಯಂತ ಮುಖ್ಯ. ಟ್ರೋಪೋನಿನ್ ಮಟ್ಟ ಹೆಚ್ಚಾದರೆ ಹೃದಯ ಸ್ನಾಯು ಹಾನಿಯ ಸೂಚನೆ.
ಹೈ-ಸೆನ್ಸಿಟಿವಿಟಿ CRP ಪರೀಕ್ಷೆ (hs-CRP)
ರಕ್ತದಲ್ಲಿನ ಉರಿಯೂತದ ಮಟ್ಟವನ್ನು ಅಳೆಯುವ ಪರೀಕ್ಷೆ. ಇದು ದೀರ್ಘಕಾಲದ ಸೂಕ್ಷ್ಮ ಉರಿಯೂತವನ್ನು ಪತ್ತೆ ಹಚ್ಚಿ, ಹೃದ್ರೋಗದ ಅಪಾಯದ ಮಟ್ಟವನ್ನು ನಿರ್ಣಯಿಸಲು ಸಹಾಯ ಮಾಡುತ್ತದೆ.
ಹೃದಯಾಘಾತವನ್ನು ತಡೆಯಲು ಮುಂಚಿತ ತಪಾಸಣೆಗಳು ಅತ್ಯಗತ್ಯ. ಜೀವನ ಶೈಲಿಯನ್ನು ಆರೋಗ್ಯಕರವಾಗಿರಿಸಿಕೊಂಡು, ತಜ್ಞರ ಸಲಹೆಯಂತೆ ಸಮಯಕ್ಕೆ ತಪಾಸಣೆ ಮಾಡಿಸುವುದು ಯುವಕರಿಗೂ ಹೃದಯ ರಕ್ಷಣೆಗೆ ಮುಖ್ಯವಾಗಿರುತ್ತದೆ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)