ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಭೇಟಿ ನೀಡಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮಾತನಾಡುವ ಭರದಲ್ಲಿ ಭಾರತವನ್ನು ಐಷಾರಾಮಿ ಮರ್ಸಿಡಿಸ್ ಕಾರಿಗೆ ಹೋಲಿಸಿದ್ದಾರೆ. ಆದ್ರೆ ವಿಚಿತ್ರವಾದ ಸಂಗತಿಯೆಂದರೆ ತನ್ನ ಸ್ವಂತ ದೇಶವಾದ ಪಾಕಿಸ್ತಾನವನ್ನು ಜಲ್ಲಿಕಲ್ಲು ತುಂಬಿದ ಡಂಪ್ ಟ್ರಕ್‌ಗೆ ಹೋಲಿಸಿದ್ದಾರೆ. ಇದೀಗ ಅಸೀಮ್ ಮುನೀರ್ ಈ ಹೋಲಿಕೆಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
ನಿಮ್ಮ ಜೀವನದಲ್ಲಿ ನೀವು ಹೇಳಿದ ಸತ್ಯ ಇದೊಂದೇ ಇರಬೇಕು ಎಂದು ಭಾರತೀಯರ ಸಾಮಾಜಿಕ ಜಾಲತಾಣದ ಬಳಕೆದಾರರು ಲೇವಡಿ ಮಾಡಿದ್ದಾರೆ.
ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಪಾಕಿಸ್ತಾನಿ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಸಿಮ್ ಮುನೀರ್, ಭಾರತದಿಂದ ಅಸ್ತಿತ್ವದ ಬೆದರಿಕೆಯನ್ನು ಎದುರಿಸಿದರೆ ಪಾಕಿಸ್ತಾನ ಪರಮಾಣು ದಾಳಿಯ ಮೂಲಕ ಅರ್ಧ ಜಗತ್ತನ್ನು ನಾಶಪಡಿಸುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಇದಾದ ನಂತರ ಅವರು ನೀಡಿದ ಮತ್ತೊಂದು ಹೇಳಿಕೆ ಭಾರೀ ಟ್ರೋಲಾಗುತ್ತಿದೆ.ಭಾರತವು ಹೊಳೆಯುವ ಮರ್ಸಿಡಿಸ್ ಆದರೆ ನಾವು ಪಾಕಿಸ್ತಾನವರು ಜಲ್ಲಿಕಲ್ಲು ತುಂಬಿದ ಡಂಪ್ ಟ್ರಕ್. ಒಂದುವೇಳೆ ಟ್ರಕ್ ಆ ಐಷಾರಾಮಿ ಕಾರಿಗೆ ಡಿಕ್ಕಿ ಹೊಡೆದರೆ ಯಾರು ಸೋಲುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅವರು ಹೇಳಿದ್ದಾರೆ. ಆದರೆ, ಅಸಿಮ್ ಮುನೀರ್ ಅವರ ಹೋಲಿಕೆ ಈಗ ಟ್ರೋಲ್ ಆಗುತ್ತಿದೆ.