ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಪ್ರಧಾನಿ ಮೋದಿ ಮಾತುಕತೆ: ಸಂಘರ್ಷದ ಶಾಂತಿಯುತ ಪರಿಹಾರಕ್ಕೆ ಸಲಹೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.

ಜಪೋರಿಝಿಯಾದಲ್ಲಿನ ಬಸ್ ನಿಲ್ದಾಣದ ಮೇಲೆ ನಡೆದ ಮಾರಕ ಬಾಂಬ್ ದಾಳಿ ಸೇರಿದಂತೆ ಇತ್ತೀಚಿನ ರಷ್ಯಾದ ದಾಳಿಯ ಬಗ್ಗೆ ಝೆಲೆನ್ಸ್ಕಿ ಮೋದಿಗೆ ವಿವರಿಸಿದರು. ಈ ದಾಳಿಯಲ್ಲಿ ಡಜನ್ಗಟ್ಟಲೆ ಜನರು ಗಾಯಗೊಂಡಿದ್ದರು. ಶಾಂತಿಗಾಗಿ ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ರಷ್ಯಾ ತನ್ನ ಆಕ್ರಮಣದ ಪ್ರಯತ್ನಗಳನ್ನು ಮುಂದುವರೆಸಿದೆ. ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ಯಾವುದೇ ಇಚ್ಛೆಯನ್ನು ತೋರಿಸುತ್ತಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಒತ್ತಿ ಹೇಳಿದರು.

ಈ ವೇಳೆ ಭಾರತದ ನಿರಂತರ ಬೆಂಬಲಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಝೆಲೆನ್ಸ್ಕಿ, ಸಂಘರ್ಷಕ್ಕೆ ಸಂಬಂಧಿಸಿದ ಯಾವುದೇ ಪರಿಹಾರವು ಉಕ್ರೇನ್ ಅನ್ನು ನೇರವಾಗಿ ಒಳಗೊಂಡಿರಬೇಕು. ಉಕ್ರೇನ್ ಅನ್ನು ಬಿಟ್ಟು ರಷ್ಯಾದ ಜೊತೆ ಮಾತುಕತೆ ನಡೆಸಿದರೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅಂತಾರಾಷ್ಟ್ರೀಯ ನಿರ್ಬಂಧಗಳು ಅದರಲ್ಲೂ ವಿಶೇಷವಾಗಿ ತೈಲದಂತಹ ರಷ್ಯಾದ ಇಂಧನ ರಫ್ತುಗಳನ್ನು ಗುರಿಯಾಗಿಸಿಕೊಂಡು, ಮಾಸ್ಕೋದ ಯುದ್ಧಕ್ಕೆ ಹಣಕಾಸು ಒದಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಭಾರತ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದರಿಂದ ಝೆಲೆನ್ಸ್ಕಿ ಭಾರತದ ಪ್ರಧಾನಿಯ ಜೊತೆ ಈ ವಿಷಯ ಪ್ರಸ್ತಾಪಿಸಿದ್ದಾರೆ.

ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಪ್ರತಿಪಾದಿಸುವ ಭಾರತದ ದೀರ್ಘಕಾಲದ ನಿಲುವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಝೆಲೆನ್ಸ್ಕಿ ಅವರ ದೃಷ್ಟಿಕೋನಗಳಿಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪರಸ್ಪರ ಆಸಕ್ತಿಯ ವಿವಿಧ ಕ್ಷೇತ್ರಗಳಲ್ಲಿ ಸಹಕಾರವನ್ನು ಗಟ್ಟಿಗೊಳಿಸುವ ಅವಕಾಶಗಳನ್ನು ಅವರು ಚರ್ಚಿಸಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!