ಹೊಸದಿಗಂತ ವರದಿ ಮಡಿಕೇರಿ:
ಸಿ ಆ್ಯಂಡ್ ಡಿ ಭೂವಿವಾದಕ್ಕೆ ಸಂಬಂಧಿಸಿದಂತೆ ತಾಲೂಕು ರೈತ ಹೋರಾಟ ಸಮಿತಿ ಹಾಗೂ ರೈತ ಸಂಘ ಕರೆ ನೀಡಿದ್ದ ತಾಲೂಕು ಬಂದ್’ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಗ್ರಾಮೀಣ ಭಾಗಗಳಲ್ಲಿ ರಸ್ತೆಗೆ ಅಡ್ಡಲಾಗಿ ಮರಕಡಿದು ಹಾಕಿ ಸಂಚಾರ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದ್ದು, ವಾಹನ ಸಂಚಾರವಿಲ್ಲದೆ ಜನಸಾಮಾನ್ಯರು ಪಟ್ಟಣಕ್ಕೆ ಆಗಮಿಸದಿದ್ದರಿಂದ ಸರ್ಕಾರಿ ಕಚೇರಿಗಳೆಲ್ಲಾ ಬಿಕೋ ಎನ್ನುತ್ತಿತ್ತು. ಪಟ್ಟಣದ ಚನ್ನಬಸಪ್ಪ ಸಭಾಂಗಣ, ಎಸ್.ಜಿ.ಎಂ ಬಾಲಿಕಾ ಪ್ರೌಢ ಶಾಲೆ ಹಾಗೂ ವಿವೇಕಾನಂದ ವೃತ್ತದ ಬಳಿ ರಸ್ತೆ ತಡೆ ನಡೆಸಿದರು.
ವಿವೇಕಾನಂದ ವೃತ್ತದ ಬಳಿ ನೂರಾರು ಸಂಖ್ಯೆಯಲ್ಲಿ ಸೇರಿದ ರೈತರು ಭಾರಿ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಕೃಷ್ಣಮೂರ್ತಿ ಹಾಗೂ ರೇಂಜರ್ ಶೈಲೇಂದ್ರ ಅವರನ್ನು ಸುತ್ತುವರೆದ ರೈತರು ಸಿ ಆ್ಯಂಡ್ ಡಿ ಭೂವಿವಾದಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸ್ಥಳಕ್ಕೆ ಆಗಮಿಸಬೇಕು ಹಾಗೂ ಅಧಿವೇಶನ ನಡೆಯುತ್ತಿರುವುದರಿಂದ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಅಲ್ಲಿಯವರೆಗೂ ಸ್ಥಳಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದರು.