ಅಧಿಕ ತೂಕವು ಸಾಮಾನ್ಯ ಸಮಸ್ಯೆಯಲ್ಲ, ಅನೇಕ ಗಂಭೀರ ಆರೋಗ್ಯ ತೊಂದರೆಗಳಿಗೆ ಕಾರಣವಾಗುವ ಅಂಶವಾಗಿದೆ. ಹೃದಯ ರೋಗ, ಮಧುಮೇಹ, ಉಚ್ಚ ರಕ್ತದೊತ್ತಡ ಸೇರಿದಂತೆ ಹಲವು ಸಮಸ್ಯೆಗಳ ಅಪಾಯ ಹೆಚ್ಚುತ್ತದೆ. ತೂಕ ನಿಯಂತ್ರಣಕ್ಕೆ ವ್ಯಾಯಾಮದ ಜೊತೆಗೆ ಸಮತೋಲಿತ ಆಹಾರವೂ ಅಗತ್ಯ. ವಿಶೇಷವಾಗಿ, ಕೆಲವು ತರಕಾರಿಗಳನ್ನು ಪ್ರತಿದಿನದ ಆಹಾರದಲ್ಲಿ ಸೇರಿಸುವುದರಿಂದ ಕೊಬ್ಬಿನ ಪ್ರಮಾಣ ಕಡಿಮೆಯಾಗಲು ಸಹಾಯ ಮಾಡುತ್ತದೆ.
ಕ್ಯಾರೆಟ್ ಮತ್ತು ಟೊಮೆಟೊ
ಬೆಳಗಿನ ಉಪಾಹಾರದಲ್ಲಿ ಕ್ಯಾರೆಟ್ ಹಾಗೂ ಟೊಮೆಟೊ ರಸ ಅಥವಾ ಸ್ಮೂಥಿ ಸೇವನೆಯು ತೂಕ ಇಳಿಸುವಲ್ಲಿ ಪರಿಣಾಮಕಾರಿ. ಇವು ಜೀವಸತ್ವ, ಕ್ಯಾಲ್ಸಿಯಂ ಮತ್ತು ಕಬ್ಬಿಣದಲ್ಲಿ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಸೌತೆಕಾಯಿ ಮತ್ತು ಸಲಾಡ್ ತರಕಾರಿಗಳು
ಮಧ್ಯಾಹ್ನ ಅಥವಾ ರಾತ್ರಿ ಊಟದ ಮೊದಲು ಸೌತೆಕಾಯಿ, ಟೊಮೆಟೊ, ಕ್ಯಾರೆಟ್‌ಗಳಿಂದ ತಯಾರಿಸಿದ ಸಲಾಡ್ ತಿನ್ನುವುದು ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ, ಇದರಿಂದ ಅನ್ನದ ಸೇವನೆ ಕಡಿಮೆಯಾಗುತ್ತದೆ.
ಬೀನ್ಸ್
ಪ್ರೋಟೀನ್ ಮತ್ತು ಫೈಬರ್‌ಗಳಲ್ಲಿ ಸಮೃದ್ಧವಾದ ಬೀನ್ಸ್ ದೀರ್ಘಕಾಲ ಹಸಿವಿನ ಭಾವನೆಯನ್ನು ತಡೆಯುತ್ತದೆ. ಡಯಟ್ ಫಾಲೋ ಮಾಡುವವರಿಗೆ ಇದು ಉತ್ತಮ ಆಯ್ಕೆ.
ತರಕಾರಿ ಸೂಪ್
ಸಂಜೆಯ ವೇಳೆಗೆ ಬೇಯಿಸಿದ ವಿವಿಧ ತರಕಾರಿಗಳಿಂದ ತಯಾರಿಸಿದ ಸೂಪ್ ಸೇವಿಸುವುದು ತೂಕ ಕಡಿಮೆ ಮಾಡುವಲ್ಲಿ ಸಹಕಾರಿ. ಇದರಲ್ಲಿ ಜೀವಸತ್ವ, ಖನಿಜಗಳು ಮತ್ತು ಪ್ರೋಟೀನ್ ಹೆಚ್ಚಾಗಿ ಲಭ್ಯವಿರುತ್ತವೆ.
ಸಿರಿಧಾನ್ಯಗಳು ಮತ್ತು ಡ್ರೈಫ್ರೂಟ್ಸ್
ಸಿರಿಧಾನ್ಯಗಳ ಜೊತೆ ಬಾದಾಮಿ, ಗೋಡಂಬಿ, ಶೇಂಗಾ ಮುಂತಾದವುಗಳನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುವುದು ಶಕ್ತಿ ನೀಡುವುದರ ಜೊತೆಗೆ ತೂಕ ಇಳಿಕೆಗೆ ಸಹಕಾರಿಯಾಗಿದೆ.
ಹೆಚ್ಚುವರಿ ಸಲಹೆಗಳು:
ದಿನಕ್ಕೆ ಕನಿಷ್ಠ 7–8 ಗ್ಲಾಸ್ ನೀರು ಕುಡಿಯಿರಿ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮತ್ತು ಜೇನು ಸೇರಿಸಿ ಕುಡಿಯುವುದು ಜೀರ್ಣಕ್ರಿಯೆ ಸುಧಾರಿಸಲು ಹಾಗೂ ಕೊಬ್ಬು ಕರಗಿಸಲು ಸಹಕಾರಿ.
ತೂಕ ಇಳಿಸುವುದು ಕೇವಲ ತಾತ್ಕಾಲಿಕ ಗುರಿಯಾಗಿರಬಾರದು, ಅದು ಆರೋಗ್ಯಕರ ಜೀವನ ಶೈಲಿಯ ಭಾಗವಾಗಬೇಕು. ಸರಿಯಾದ ತರಕಾರಿಗಳ ಆಯ್ಕೆ, ಸಮತೋಲಿತ ಆಹಾರ ಮತ್ತು ನಿರಂತರ ವ್ಯಾಯಾಮದ ಮೂಲಕ ತೂಕವನ್ನು ಆರೋಗ್ಯಕರವಾಗಿ ನಿಯಂತ್ರಿಸಬಹುದು.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)