ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಸಿನಿಮಾ ‘ಸು ಫ್ರಂ ಸೋ’ ಬಿಡುಗಡೆಯಾದ ದಿನದಿಂದಲೇ ಪ್ರೇಕ್ಷಕರ ಮನ ಗೆದ್ದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸಿನ ಹೆಜ್ಜೆ ಗುರುತು ಮೂಡಿಸಿದೆ. ರಾಜ್ಯದ ಹೊರಗೂ ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಚಿತ್ರ ಈಗ ಬಾಲಿವುಡ್ ವಲಯದಲ್ಲಿ ಗಮನ ಸೆಳೆಯುತ್ತಿದೆ.
ಇತ್ತೀಚೆಗೆ ಬಾಲಿವುಡ್‌ನ ಸ್ಟಾರ್ ನಟ ಅಜಯ್ ದೇವಗನ್ ‘ಸು ಫ್ರಂ ಸೋ’ ವೀಕ್ಷಿಸಿ ನಿರ್ದೇಶಕ ಜೆಪಿ ತುಮ್ಮಿನಾಡ್ ಅವರನ್ನು ಸ್ವತಃ ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಜೆಪಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಅಜಯ್ ದೇವಗನ್ ನಮ್ಮ ಸಿನಿಮಾ ನೋಡಿ ಮೆಚ್ಚಿಕೊಂಡು, ತಮ್ಮ ಮನೆಗೆ ಆಹ್ವಾನಿಸಿ ಸಿನಿಮಾ ಕುರಿತು ಚರ್ಚಿಸಿದರು. ಅವರ ವಿನಯಶೀಲ ಸ್ವಭಾವ ಮನಗೆದ್ದಿದೆ” ಎಂದು ಬರೆದುಕೊಂಡಿದ್ದಾರೆ.
ಅಜಯ್ ದೇವಗನ್ ಈಗಾಗಲೇ ದಕ್ಷಿಣದ ಹಲವಾರು ಸಿನಿಮಾಗಳನ್ನು ಹಿಂದಿಗೆ ರೀಮೇಕ್ ಮಾಡಿ ಯಶಸ್ಸು ಕಂಡಿದ್ದಾರೆ. ‘ದೃಶ್ಯಂ’, ‘ಭೋಲಾ’, ‘ಸಿಂಘಂ’ ಮುಂತಾದ ಚಿತ್ರಗಳು ಅದರ ಉದಾಹರಣೆ. ಇತ್ತೀಚೆಗೆ ರಾಜ್ ಬಿ ಶೆಟ್ಟಿ, ‘ಸು ಫ್ರಂ ಸೋ’ ರೀಮೇಕ್ ಹಕ್ಕುಗಳಿಗೆ ಹಿಂದಿ ಚಿತ್ರೋದ್ಯಮ ಆಸಕ್ತಿ ತೋರಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅಜಯ್ ದೇವಗನ್ ಭೇಟಿ ಈ ಮಾತಿಗೆ ಮತ್ತಷ್ಟು ಬಲ ತುಂಬಿದೆ.
ರಾಜ್ ಬಿ ಶೆಟ್ಟಿಯ ಲೈಟರ್ ಬುದ್ಧ ಬ್ಯಾನರ್‌ನಲ್ಲಿ ನಿರ್ಮಾಣಗೊಂಡು, ಜೆಪಿ ತುಮ್ಮಿನಾಡ್ ನಿರ್ದೇಶಿಸಿ ನಟಿಸಿರುವ ಈ ಸಿನಿಮಾ ಬಿಡುಗಡೆಯಾಗಿ 17 ದಿನಗಳಲ್ಲಿ ಸುಮಾರು 70 ಕೋಟಿ ರೂ. ಗಳಿಸಿದೆ. ಇನ್ನೂ ಹೌಸ್‌ಫುಲ್ ಪ್ರದರ್ಶನ ಮುಂದುವರೆದಿರುವುದರಿಂದ 100 ಕೋಟಿ ಕ್ಲಬ್ ಸೇರುವ ಸಾಧ್ಯತೆ ಹೆಚ್ಚಾಗಿದೆ.
‘ಸು ಫ್ರಂ ಸೋ’ ಈಗಾಗಲೇ ಕನ್ನಡದಲ್ಲಿ ದಾಖಲೆ ಬರೆದಿರುವುದರ ಜೊತೆಗೆ, ಬಾಲಿವುಡ್‌ನಲ್ಲಿ ಕೂಡ ಹೊಸ ಅಧ್ಯಾಯ ಆರಂಭಿಸುವ ಲಕ್ಷಣಗಳು ಗೋಚರಿಸುತ್ತಿವೆ. ಮುಂದಿನ ದಿನಗಳಲ್ಲಿ ರೀಮೇಕ್ ರೂಪದಲ್ಲಿ ಇದು ಮತ್ತಷ್ಟು ಪ್ರೇಕ್ಷಕರ ಹೃದಯ ಗೆಲ್ಲುವ ನಿರೀಕ್ಷೆಯಿದೆ.