ಟೆಸ್ಟ್​ ಇತಿಹಾಸದಲ್ಲಿ ಇದೇ ಮೊದಲು ಡಿಜಿಟಲ್ ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದ IND vs ENG ಟೆಸ್ಟ್ ಸರಣಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್‌ಗಳ ಆಂಡರ್ಸನ್-ಸಚಿನ್ ಟ್ರೋಫಿ ಇತಿಹಾಸದಲ್ಲಿ ಹೊಸ ಸಾಧನೆ ಮಾಡಿದೆ. ಇಂಗ್ಲೆಂಡ್‌ನಲ್ಲಿ ನಡೆದ ಈ ಸರಣಿ, 148 ವರ್ಷದ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿ ಡಿಜಿಟಲ್ ವೇದಿಕೆಯಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ದೀರ್ಘ ಸ್ವರೂಪದ ಸರಣಿಯಾಗಿದೆ.

ಓವಲ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್‌ನ ಕೊನೆಯ ದಿನ, ಜಿಯೋಹಾಟ್‌ಸ್ಟಾರ್‌ನಲ್ಲಿ 1.3 ಕೋಟಿ ಜನರು ಏಕಕಾಲದಲ್ಲಿ ವೀಕ್ಷಿಸಿದ ದಾಖಲೆ ನಿರ್ಮಾಣವಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಲೈವ್ ವೀಕ್ಷಣೆ ಇದು ಮೊಟ್ಟ ಮೊದಲ ಬಾರಿಗೆ ನಡೆದಿದೆ. ಸರಣಿಯು ಒಟ್ಟಾರೆ 17 ಕೋಟಿ ವೀಕ್ಷಕರನ್ನು ಆಕರ್ಷಿಸಿದ್ದು, 66 ಬಿಲಿಯನ್ ನಿಮಿಷಗಳ ವೀಕ್ಷಣೆ ಸಮಯವನ್ನು ದಾಖಲಿಸಿದೆ.

ಈ ಐದು ಟೆಸ್ಟ್‌ಗಳ ಸರಣಿಯು 2-2 ಸಮಬಲದಲ್ಲಿ ಅಂತ್ಯಗೊಂಡಿತು. ಪ್ರತಿ ಪಂದ್ಯವೂ ಕೊನೆಯ ದಿನದವರೆಗೂ ರೋಚಕವಾಗಿದ್ದು, ಪ್ರೇಕ್ಷಕರನ್ನು ಕುತೂಹಲದಲ್ಲಿ ಇಟ್ಟಿತ್ತು. ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ 5 ವಿಕೆಟ್‌ಗಳಿಂದ ಗೆದ್ದರೆ, ಎರಡನೇ ಟೆಸ್ಟ್‌ನಲ್ಲಿ ಭಾರತ 336 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ 22 ರನ್‌ಗಳಿಂದ ಗೆದ್ದಿದ್ದು, ನಾಲ್ಕನೇ ಟೆಸ್ಟ್ ಡ್ರಾದಲ್ಲಿ ಅಂತ್ಯವಾಯಿತು. ಅಂತಿಮ ಟೆಸ್ಟ್‌ನಲ್ಲಿ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಭಾರತ ಗೆಲುವು ಸಾಧಿಸಿತು.

ಈ ಸರಣಿಯನ್ನು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರಸಾರ ಮಾಡಲಾಗಿದ್ದು, ದೇಶದಾದ್ಯಂತ ಕ್ರಿಕೆಟ್ ಅಭಿಮಾನಿಗಳನ್ನು ತಲುಪಲು ನೆರವಾಯಿತು.

ಆಂಡರ್ಸನ್-ಸಚಿನ್ ಟ್ರೋಫಿ ಕೇವಲ ಮೈದಾನದಲ್ಲಿ ಮಾತ್ರವಲ್ಲ, ಡಿಜಿಟಲ್ ಜಗತ್ತಲ್ಲೂ ತನ್ನದೇ ಆದ ಇತಿಹಾಸ ಬರೆದಿದ್ದು, ಮುಂದಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆಗೆ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!