ಹೊಸದಿಗಂತ ಡಿಜಿಟಲ್ ಡೆಸ್ಕ್:
ರಜನಿಕಾಂತ್ ಅಭಿನಯದ ಪ್ರತೀ ಚಿತ್ರ ಬಿಡುಗಡೆಯಾಗುವಾಗ ಅಭಿಮಾನಿಗಳಲ್ಲಿ ಕಾಣಸಿಗುವ ಹುಮ್ಮಸ್ಸು, ಈ ಬಾರಿ ‘ಕೂಲಿ’ ಸಿನಿಮಾದಲ್ಲೂ ಪೀಕ್ ಪಾಯಿಂಟ್ ತಲುಪಿದೆ. ಆಗಸ್ಟ್ 14ರಂದು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ದೇಶದಾದ್ಯಂತ ಅಭಿಮಾನಿಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ, ಮೊದಲ ಶೋ ವೀಕ್ಷಿಸಲು ಟಿಕೆಟ್‌ಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದು, ಚೆನ್ನೈನಲ್ಲಿ ಹಲವೆಡೆ ಬ್ಲಾಕ್ ಟಿಕೆಟ್ ದರ 4500 ರೂಪಾಯಿವರೆಗೆ ಏರಿಕೆಯಾಗಿದೆ.
ವರದಿಗಳ ಪ್ರಕಾರ, ಚೆನ್ನೈನಲ್ಲಿ ‘ಕೂಲಿ’ ಚಿತ್ರದ 130ಕ್ಕೂ ಹೆಚ್ಚು ಶೋಗಳ ಟಿಕೆಟ್‌ಗಳು ಬಿಡುಗಡೆಯ ಮೊದಲೇ ಸೋಲ್ಡ್ ಔಟ್ ಆಗಿವೆ. ಮೂಲ ದರದಲ್ಲಿ ಟಿಕೆಟ್ ಸಿಗದ ಅನೇಕರು ಬ್ಲಾಕ್‌ನಲ್ಲಿ ದುಬಾರಿ ಬೆಲೆಗೆ ಖರೀದಿಸುತ್ತಿದ್ದಾರೆ. ಸಾಮಾನ್ಯ ಚಿತ್ರಮಂದಿರಗಳಲ್ಲಿ ಕಡಿಮೆ ದರ ಇದ್ದರೂ, ಮಲ್ಟಿಪ್ಲೆಕ್ಸ್‌ಗಳು ಮತ್ತು ಬ್ಲಾಕ್ ಮಾರಾಟಗಾರರಿಂದ ಬೆಲೆ ಗಗನಕ್ಕೇರಿದೆ.
ಈ ಚಿತ್ರದ ಮೇಲೆ ಹೈಪ್ ಹೆಚ್ಚಲು ಪ್ರಮುಖ ಕಾರಣ ಭರ್ಜರಿ ತಾರಾಗಣ, ಯಶಸ್ವಿ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ನಿರ್ದೇಶನ ಹಾಗೂ ರಜನಿಕಾಂತ್ ಜೊತೆಗೆ ಆಮಿರ್ ಖಾನ್, ನಾಗಾರ್ಜುನ, ಉಪೇಂದ್ರ, ಶ್ರುತಿ ಹಾಸನ್, ರಚಿತಾ ರಾಮ್, ಸತ್ಯರಾಜ್ ಮುಂತಾದವರು ಅಭಿನಯಿಸಿದ್ದಾರೆ. ಟ್ರೇಲರ್ ಬಿಡುಗಡೆಯ ಬಳಿಕ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ.
ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲಿಯೂ ‘ಕೂಲಿ’ ಚಿತ್ರದ ಟಿಕೆಟ್‌ಗಳ ಬೇಡಿಕೆ ಜೋರಾಗಿದೆ. 500 ಮತ್ತು 1000 ರೂಪಾಯಿ ದರದ ಟಿಕೆಟ್‌ಗಳೂ ಕ್ಷಣಾರ್ಧದಲ್ಲಿ ಮುಗಿದಿವೆ. ಇದೇ ದಿನ ‘ವಾರ್ 2’ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ಎರಡೂ ಸಿನಿಮಾಗಳ ನಡುವೆ ಪೈಪೋಟಿ ತೀವ್ರವಾಗಿದೆ. ಆದರೆ ಪ್ರೀ-ಬುಕಿಂಗ್ ವಿಚಾರದಲ್ಲಿ ‘ಕೂಲಿ’ ಸಿನಿಮಾ ಮುಂಚಿತದಲ್ಲಿದೆ.
‘ಕೂಲಿ’ ಚಿತ್ರದ ಬಿಡುಗಡೆಯ ಮುನ್ನವೇ ಹುಟ್ಟಿದ ಈ ಕ್ರೇಜ್, ಪ್ರೀಮಿಯರ್ ದಿನದ ವೀಕ್ಷಣೆ ಮತ್ತು ವಿಮರ್ಶೆಗಳ ಮೇಲೆ ಚಿತ್ರದ ಮುಂದಿನ ಪ್ರಯಾಣ ಅವಲಂಬಿತವಾಗಿದೆ. ಅಭಿಮಾನಿಗಳ ನಿರೀಕ್ಷೆ ಪೂರ್ತಿಯಾದರೆ, ಇದು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ.