ಮಧುಮೇಹ ಇರುವವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು ಅತ್ಯಂತ ಮುಖ್ಯ. ತಜ್ಞರ ಪ್ರಕಾರ, ರಾತ್ರಿಯ ವೇಳೆಯಲ್ಲಿ ಸಕ್ಕರೆ ಮಟ್ಟದಲ್ಲಿ ಸ್ವಾಭಾವಿಕ ಏರಿಳಿತವಾಗುತ್ತದೆ. ಟೈಪ್ 1 ಅಥವಾ ಟೈಪ್ 2 ಮಧುಮೇಹ ಹೊಂದಿರುವವರು ವಿಶೇಷವಾಗಿ ಮುಂಜಾನೆ ಹೈಪರ್ಗ್ಲೈಸೀಮಿಯಾ ಅನುಭವಿಸುವ ಸಾಧ್ಯತೆ ಇದೆ. ಈ ಕಾರಣದಿಂದ, ಮಲಗುವ ಮುನ್ನ ಸರಿಯಾದ ಆಹಾರ ಆಯ್ಕೆ ಮಾಡುವುದು, ರಾತ್ರಿಯಿಡೀ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯಕ.
ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು
ಮಲಗುವ ಮುನ್ನ ಬಾದಾಮಿ, ವಾಲ್‌ನಟ್ ಅಥವಾ ಕಡಲೆಕಾಯಿ ಸೇವನೆ ಉತ್ತಮ. ಇವುಗಳಲ್ಲಿ ವಿಟಮಿನ್ E, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ. ಮೊಟ್ಟೆ ಕೂಡ ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ಕಾರ್ಬೋಹೈಡ್ರೇಟ್ ಅಲ್ಪ ಪ್ರಮಾಣದಲ್ಲಿದೆ.
ಲಘು ತರಕಾರಿ ಆಹಾರ
ಹಸಿರು ತರಕಾರಿಗಳು, ಬೀನ್ಸ್ ಮತ್ತು ತೆಂಗಿನಕಾಯಿ ಮಿಶ್ರಿತ ಸೂಪ್ ಅಥವಾ ಜ್ಯೂಸ್, ಜೀರ್ಣಕ್ರಿಯೆಯನ್ನು ಸುಧಾರಿಸುವ ಜೊತೆಗೆ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಪಿಷ್ಟರಹಿತ ತರಕಾರಿಗಳು ಕಡಿಮೆ ಕ್ಯಾಲೊರಿಗಳು ಮತ್ತು ಕಾರ್ಬೋಹೈಡ್ರೇಟ್ ಹೊಂದಿದ್ದು, ಫೈಬರ್ ಹಾಗೂ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ.
ಧಾನ್ಯ ಮತ್ತು ಪನ್ನೀರ್
ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಗೋಧಿ, ಧಾನ್ಯಗಳು ಮತ್ತು ಸಂಸ್ಕರಿಸದ ಪನ್ನೀರ್ ರಾತ್ರಿ ಸೇವನೆಗೆ ಸೂಕ್ತ. ಇವು ದೇಹಕ್ಕೆ ದೀರ್ಘಕಾಲ ಶಕ್ತಿ ನೀಡುತ್ತವೆ ಹಾಗೂ ರಕ್ತದಲ್ಲಿನ ಗ್ಲೂಕೋಸ್ ಏರಿಕೆಯನ್ನು ತಡೆಗಟ್ಟುತ್ತವೆ.
ಹಗುರ ತಿಂಡಿ ಆಯ್ಕೆಗಳು
ಪಾಪ್‌ಕಾರ್ನ್ ಹಗುರವಾಗಿದ್ದು, ಫೈಬರ್ ಮತ್ತು ಪ್ರೋಟೀನ್ ಒದಗಿಸುತ್ತದೆ. ಸೇಬು ಹಣ್ಣು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಮಧುಮೇಹಿಗಳಿಗೆ ಹಿತಕರ.
ರಾತ್ರಿ ಮಲಗುವ ಮುನ್ನ ಸರಿಯಾದ ಆಹಾರ ಆಯ್ಕೆ ಮಾಡುವುದು ಮಧುಮೇಹ ನಿಯಂತ್ರಣಕ್ಕೆ ಮಹತ್ವದ ಪಾತ್ರ ವಹಿಸುತ್ತದೆ. ಹೆಚ್ಚು ಕಾರ್ಬೋಹೈಡ್ರೇಟ್ ಮತ್ತು ಸಿಹಿ ಆಹಾರಗಳನ್ನು ತಪ್ಪಿಸಿ, ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳಿರುವ ಆಹಾರವನ್ನು ಆಯ್ಕೆ ಮಾಡಿದರೆ, ಬೆಳಿಗ್ಗೆ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿಡಬಹುದು.