ಐಸಿಸಿಯ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡ ಕ್ಯಾಪ್ಟನ್! ಚರಿತ್ರೆ ಸೃಷ್ಟಿಸಿದ ಶುಭ್​ಮನ್ ಗಿಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಮತ್ತೊಮ್ಮೆ ಅಂತತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಅದ್ಭುತ ಬ್ಯಾಟಿಂಗ್ ಪ್ರದರ್ಶನದೊಂದಿಗೆ, ಅವರು ಐಸಿಸಿ ಜುಲೈ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಹಾಗೂ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವಿಯಾನ್ ಮುಲ್ಡರ್ ಕೂಡ ಸ್ಪರ್ಧೆ ನೀಡಿದರೂ, ಗಿಲ್ ತಮ್ಮ ತೀಕ್ಷ್ಣ ಆಟದ ಮೂಲಕ ಇಬ್ಬರನ್ನೂ ಹಿಂದಿಕ್ಕಿದರು.

ಇತ್ತೀಚೆಗೆ ಅಂತ್ಯಗೊಂಡ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಗಿಲ್ ಅದ್ಭುತ ಫಾರ್ಮ್ ತೋರಿಸಿದರು. ಜುಲೈ ತಿಂಗಳಲ್ಲಿ ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಅವರು 94.50 ಸರಾಸರಿಯಲ್ಲಿ ಒಟ್ಟು 567 ರನ್ ಬಾರಿಸಿದರು. ಆರು ಇನ್ನಿಂಗ್ಸ್‌ಗಳಲ್ಲಿ ಒಂದು ದ್ವಿಶತಕ ಮತ್ತು ಎರಡು ಶತಕಗಳನ್ನು ದಾಖಲಿಸಿ, ನಾಯಕತ್ವ ವಹಿಸಿದ ಮೊದಲ ವಿದೇಶಿ ಪ್ರವಾಸದಲ್ಲೇ ಯಶಸ್ಸು ಗಳಿಸಿದರು. ಈ ಸಾಧನೆ ಅವರನ್ನು ಪ್ರಶಸ್ತಿಗೆ ಅರ್ಹರನ್ನಾಗಿಸಿದೆ.

ಪ್ರಶಸ್ತಿ ಗೆದ್ದ ಸಂತಸವನ್ನು ಗಿಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, “ಈ ಗೌರವ ನನಗೆ ವಿಶೇಷ. ಬರ್ಮಿಂಗ್‌ಹ್ಯಾಮ್‌ನಲ್ಲಿ ಗಳಿಸಿದ ದ್ವಿಶತಕ ನನ್ನ ವೃತ್ತಿಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ,” ಎಂದು ತಿಳಿಸಿದ್ದಾರೆ.

ಗಿಲ್‌ಗೆ ಇದು ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ದೊರೆತ ನಾಲ್ಕನೇ ಬಾರಿಯಾಗಿದೆ. 2023ರ ಜನವರಿ, ಸೆಪ್ಟೆಂಬರ್ ಹಾಗೂ 2024ರ ಫೆಬ್ರವರಿಯಲ್ಲಿ ಅವರು ಈ ಗೌರವ ಪಡೆದಿದ್ದರು. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕು ಬಾರಿ ಈ ಪ್ರಶಸ್ತಿ ಪಡೆದ ಮೊದಲ ಕ್ರಿಕೆಟಿಗ ಎಂಬ ಸಾಧನೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು 75.40 ಸರಾಸರಿಯಲ್ಲಿ 754 ರನ್ ಗಳಿಸಿದರು. ಈ ಶ್ರೇಷ್ಠ ಪ್ರದರ್ಶನದಿಂದ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನೂ ಪಡೆದುಕೊಂಡರು. ನಾಯಕತ್ವ ವಹಿಸಿದ ಮೊದಲ ಸರಣಿಯಲ್ಲೇ ಭಾರತವನ್ನು 2-2 ಸಮಬಲಕ್ಕೆ ತಂದು, ತಂಡದ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.

ಶುಭಮನ್ ಗಿಲ್ ತಮ್ಮ ನಿರಂತರ ಪ್ರದರ್ಶನ, ಶ್ರೇಷ್ಠ ನಾಯಕತ್ವ ಮತ್ತು ಅಸಾಧಾರಣ ಬ್ಯಾಟಿಂಗ್ ಕೌಶಲ್ಯದ ಮೂಲಕ ಭಾರತೀಯ ಕ್ರಿಕೆಟ್‌ಗೆ ಮತ್ತೊಂದು ಹೆಮ್ಮೆಯ ಕ್ಷಣ ತಂದಿದ್ದಾರೆ. ಅವರ ಸಾಧನೆ ಕೇವಲ ವೈಯಕ್ತಿಕ ಮಟ್ಟದಲ್ಲಿ ಮಾತ್ರವಲ್ಲ, ಭಾರತೀಯ ತಂಡದ ಉಜ್ವಲ ಭವಿಷ್ಯಕ್ಕೆ ಕೂಡ ಬಲವರ್ಧಕವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!