ಇಂದಿನ ಜೀವನ ಶೈಲಿಯಲ್ಲಿ ಸ್ಮಾರ್ಟ್‌ಫೋನ್ ಕೇವಲ ಸಂವಹನ ಸಾಧನವಲ್ಲ, ಅದು ಕೆಲಸ, ಮನರಂಜನೆ, ವ್ಯವಹಾರ ಮತ್ತು ಸಾಮಾಜಿಕ ಸಂಪರ್ಕಗಳ ಕೇಂದ್ರವಾಗಿದೆ. ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಬಹುತೇಕ ಕಾರ್ಯಗಳು ಸ್ಮಾರ್ಟ್‌ಫೋನ್‌ನಲ್ಲಿಯೇ ಮುಗಿಯುತ್ತಿವೆ. ಈ ಅನುಕೂಲತೆಗಳ ಮಧ್ಯೆಯೇ, ಸ್ಮಾರ್ಟ್‌ಫೋನ್ ಬಳಕೆ ಜನರಲ್ಲಿ ಅತಿಯಾದ ಅವಲಂಬಿತ್ವವನ್ನು ಉಂಟುಮಾಡುತ್ತಿದೆ.
ಸಮೀಕ್ಷೆಗಳ ಪ್ರಕಾರ, ಒಬ್ಬ ಸ್ಮಾರ್ಟ್‌ಫೋನ್ ಬಳಕೆದಾರ ದಿನಕ್ಕೆ ಸರಾಸರಿ 58 ಬಾರಿ ತನ್ನ ಫೋನ್ ಪರಿಶೀಲಿಸುತ್ತಾನೆ. ಕೆಲವರಿಗೆ ಬೇರೆಯವರ ಫೋನ್ ಸದ್ದು ಬಂದರೂ ತಮಗೆ ಕರೆ ಬಂದಿದೆಯೇ ಎಂದು ತಕ್ಷಣ ಫೋನ್ ನೋಡದೆ ಇರಲು ಆಗುವುದಿಲ್ಲ. ಈ ರೀತಿಯ ಅತಿಯಾದ ಅಭ್ಯಾಸ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.
ಖಾಸಗಿ ಕಂಪನಿಯೊಂದು ನಡೆಸಿದ ಜಾಗತಿಕ ಅಧ್ಯಯನದ ಪ್ರಕಾರ, ಭಾರತೀಯರು ದಿನಕ್ಕೆ ಸರಾಸರಿ 4.9 ಗಂಟೆಗಳ ಕಾಲ ಸ್ಮಾರ್ಟ್‌ಫೋನ್‌ನಲ್ಲಿ ಸಮಯ ಕಳೆಯುತ್ತಾರೆ. ಈ ಬಳಕೆಯಲ್ಲಿ ಭಾರತ ವಿಶ್ವದಲ್ಲೇ 8ನೇ ಸ್ಥಾನದಲ್ಲಿದೆ. ಅಮೆರಿಕಾ, ಚೀನಾ ಮತ್ತು ಇಂಡೋನೇಷ್ಯಾ ಜನರು ಕ್ರಮವಾಗಿ ಹೆಚ್ಚು ಸಮಯ ಸ್ಮಾರ್ಟ್‌ಫೋನ್ ಬಳಸುವವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಜೀವನವನ್ನು ಸುಲಭ, ವೇಗ ಹಾಗೂ ಅನುಕೂಲಕರವಾಗಿಸಿದರೂ, ಅತಿಯಾದ ಬಳಕೆಯಿಂದ ಕಣ್ಣು, ನಿದ್ರೆ, ದೇಹದ ಭಂಗಿ, ಹೃದಯ ಮತ್ತು ಮೆದುಳಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವಿಶೇಷವಾಗಿ,
ಕಣ್ಣುಗಳಿಗೆ ಹಾನಿ – ದೀರ್ಘಕಾಲ ಫೋನ್ ನೋಡುವುದರಿಂದ ದೃಷ್ಟಿ ಮಸುಕಾಗುವುದು, ಕಿರಿಕಿರಿ.
ನಿದ್ರೆ ವ್ಯತ್ಯಯ – ಮಲಗುವ ಮೊದಲು ಫೋನ್ ಬಳಕೆ ಮೆಲಟೋನಿನ್ ಮಟ್ಟವನ್ನು ಕಡಿಮೆಮಾಡಿ ನಿದ್ರೆಗೆ ತೊಂದರೆ.
ದೇಹದ ಭಂಗಿ ಸಮಸ್ಯೆಗಳು – ಕತ್ತು ಬಗ್ಗಿಸುವ ಭಂಗಿ, ಕೈ-ಮೂಳೆ ನೋವು.
ಚಟುವಟಿಕೆ ಕೊರತೆ – ನಿರಂತರ ಕುಳಿತಿರುವುದು ದೈಹಿಕ ವ್ಯಾಯಾಮದ ಕೊರತೆ ಉಂಟುಮಾಡುವುದು.
ಮಾನಸಿಕ ಒತ್ತಡ – ನಿರಂತರ ನೋಟಿಫಿಕೇಶನ್‌ಗಳಿಂದ ಒತ್ತಡ, ಕಳವಳ ಹೆಚ್ಚುವುದು.
ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾದರೂ, ಮಿತವಾದ ಬಳಕೆ ಅತ್ಯಗತ್ಯ. ಹಾಸಿಗೆಯಲ್ಲಿ ಫೋನ್ ಇಡುವುದನ್ನು ತಪ್ಪಿಸಿ, ನಿರ್ದಿಷ್ಟ ಸಮಯಕ್ಕೆ ಮಾತ್ರ ಬಳಸುವ ಅಭ್ಯಾಸ ಬೆಳೆಸಿದರೆ ಆರೋಗ್ಯ ಕಾಪಾಡಬಹುದು.