ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ವಿದೇಶ ಪ್ರವಾಸಕ್ಕೆ ಕೇಂದ್ರ ಸರ್ಕಾರ ಮತ್ತೊಮ್ಮೆ ಬ್ರೇಕ್ ಹಾಕಿದೆ.
ಈ ಹಿಂದೆ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಯುಕೆ ಹಾಗೂ ಇಸ್ರೇಲ್ ಪ್ರವಾಸಕ್ಕೂ ಅನುಮತಿ ನಿರಾಕರಿಸಲಾಗಿತ್ತು. ಈಗ ಮತ್ತೊಮ್ಮೆ ಅವರ ವಿದೇಶ ಪ್ರವಾಸವನ್ನು ಕೇಂದ್ರ ತಡೆ ಹಿಡಿದಿದೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಜೆಕ್ ಗಣರಾಜ್ಯ ಮತ್ತು ನೆದರ್ಲ್ಯಾಂಡ್ಸ್ ಭೇಟಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದು, ಅವರ ನಿಗದಿತ ಭೇಟಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಯುನೈಟೆಡ್ ಕಿಂಗ್‌ಡಮ್ ಮತ್ತು ಇಸ್ರೇಲ್‌ಗೆ ಪ್ರಸ್ತಾವಿತ ಅಧಿಕೃತ ಭೇಟಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಕೇಂದ್ರ ವಿದೇಶಾಂಗ ಸಚಿವಾಲಯ (MEA) ರಾಜಕೀಯ ಅನುಮತಿ ನಿರಾಕರಿಸಿತ್ತು. ಅದಕ್ಕೂ ಮೊದಲು, ಪ್ಯಾರಿಸ್ ಒಲಿಂಪಿಕ್ಸ್ ಸಮಯದಲ್ಲಿ ಫ್ರಾನ್ಸ್‌ಗೆ ಭೇಟಿ ನೀಡುವ ಅವರ ವಿನಂತಿಯನ್ನು ನಿರಾಕರಿಸಲಾಗಿತ್ತು.
ಪಂಜಾಬ್ ಸಿಎಂ ಮಾನ್ ಅವರಿಗೆ ವಿದೇಶ ಪ್ರವಾಸಕ್ಕೆ ಮತ್ತೆ ಮತ್ತೆ ಅನುಮತಿ ನಿರಾಕರಿಸಿರುವುದಕ್ಕೆ ಆಮ್ ಆದ್ಮಿ ಪಕ್ಷ (ಎಎಪಿ) ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರವು ವಿರೋಧ ಪಕ್ಷಗಳು ಆಡಳಿತವಿರುವ ರಾಜ್ಯಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಎಎಪಿ ಆರೋಪಿಸಿದೆ.
ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ಹೂಡಿಕೆದಾರರ ಶೃಂಗಸಭೆಗೆ ಮುಂಚಿತವಾಗಿ ಪಂಜಾಬ್ ಮುಖ್ಯಮಂತ್ರಿಯವರು ರಾಜ್ಯಕ್ಕೆ ಹೂಡಿಕೆ ಪಡೆಯಲು ಎರಡು ಯುರೋಪಿಯನ್ ರಾಷ್ಟ್ರಗಳಿಗೆ ನಿಯೋಗದ ನೇತೃತ್ವ ವಹಿಸಬೇಕಿತ್ತು. ಆದರೆ ಈಗ ಕೇಂದ್ರ ವಿದೇಶ ಪ್ರವೇಶಕ್ಕೆ ತಡೆಯೊಡ್ಡಿರುವುದರಿಂದ ಪಂಜಾಬ್ ಸಿಎಂಗೆ ಈ ನಿಯೋಗ ನೇತೃತ್ವ ವಹಿಸಲು ಸಾಧ್ಯವಾಗುತ್ತಿಲ್ಲ. ಸ್ಥಾಪಿತ ಶಿಷ್ಟಾಚಾರದ ಅಡಿಯಲ್ಲಿ, ಮುಖ್ಯಮಂತ್ರಿಗಳು ಯಾವುದೇ ಅಧಿಕೃತ ವಿದೇಶ ಪ್ರಯಾಣಕ್ಕೆ ವಿದೇಶಾಂಗ ಸಚಿವಾಲಯದಿಂದ ರಾಜಕೀಯ ಅನುಮತಿ ಪಡೆಯಬೇಕಾಗುತ್ತದೆ.



